ದಾವಣಗೆರೆ: ಸ್ನೇಹಿತನ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಕಾಲೇಜಿನ ಕೊಠಡಿ ಮೇಲ್ವಿಚಾರಕರಿಗೆ ಸಿಕ್ಕಿ ಬಿದ್ದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಎಡಿಬಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಪ್ರಸ್ತುತ ವರ್ಷದ ಬಿಎ ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ಎಡಿಬಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವೀರೇಶ್ ಅಮ್ಕುಂದಿ ಎಂಬ ವಿದ್ಯಾರ್ಥಿಯ ಬದಲಿಗೆ, ನಾಗರಾಜ್ ಎಂಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ.
ಹರಪನಹಳ್ಳಿ ಪ್ರತಿಷ್ಠಿತ ವಿ.ವಿ.ಸಂಘದ ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ವೀರೇಶ್ ನ ಪರೀಕ್ಷೆ ಬರೆಯಲು ನಾಗರಾಜ್ ಬಂದಿದ್ದ. ಶನಿವಾರ ಬೆಳಗ್ಗೆ ನಡೆದ ಮೂರನೇ ಸೆಮಿಸ್ಟರ್ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ನಾಗರಾಜ್, ಮಧ್ಯಾಹ್ನದ ವೇಳೆಯ ಪರೀಕ್ಷೆಯನ್ನು ಬರೆಯಲು ಬಂದಿದ್ದ. ಈ ವೇಳೆ ಅನುಮಾನಗೊಂಡ ಕೊಠಡಿ ಮೇಲ್ವಿಚಾರಕರು ವಿದ್ಯಾರ್ಥಿಯ ಪ್ರವೇಶ ಪತ್ರ ಪರಿಶೀಲನೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ.
ಈ ಕುರಿತು ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ದೂರಿನ ಮೇರೆಗೆ ಇಬ್ಬರು ವಿದ್ಯಾರ್ಥಿಗಳನ್ನು ಹರಪ್ಪನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.