ಬೆಂಗಳೂರು: ನಕಲಿ ಬಿತ್ತನೆ ಬೀಜ ಮತ್ತು ನಕಲಿ ಗೊಬ್ಬರ ಮಾರಾಟ ಮಾಡುವ ಕಂಪನಿ ಹಾಗೂ ಮಾಲೀಕರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಕೃಷಿ ಸಚಿವರ ಪರವಾಗಿ ಉತ್ತರ ನೀಡಿದ ಈಶ್ವರಪ್ಪ, ರೈತರಿಗೆ ಮೋಸ ಮಾಡುವ ಕಂಪನಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಬಿಜೆಪಿ ಸದಸ್ಯ ರವಿಕುಮಾರ್, ರಾಜ್ಯದಲ್ಲಿ ನಕಲಿ ಬೀಜಗಳ ಹಾವಳಿ ಹೆಚ್ಚಾಗಿದೆ. ಒಂದೇ ವರ್ಷದಲ್ಲಿ 8,500 ಕ್ವಿಂಟಾಲ್ ನಕಲಿ ಬೀಜ ಸಿಕ್ಕಿದೆ. ಕೃಷಿ ಇಲಾಖೆಯೇ ದಾಳಿ ಮಾಡಿ ಸುಮಾರು 500 ಕ್ವಿಂಟಾಲ್ ವಶ ಮಾಡಿಕೊಂಡಿದೆ. 12-15 ಕೋಟಿ ಮೊತ್ತ ಇದರ ಬೆಲೆಯಾಗಿದೆ. ನಕಲಿ ಹಾಗೂ ಅಕ್ರಮ ಬೀಜದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ಇದನ್ನೂ ಓದಿ: ಓಬಿಸಿ ಮೀಸಲಾತಿ ಕೈ ಬಿಟ್ಟು ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆ ನಡೆಸುವುದಿಲ್ಲ: ಈಶ್ವರಪ್ಪ
ಇಷ್ಟೆಲ್ಲಾ ಆದರೂ ಕೇವಲ 10 ಕೇಸ್‌ಗಳು ಮಾತ್ರ ಈ ವರ್ಷ ದಾಖಲಾಗಿವೆ. ಇದು ಸರಿಯಲ್ಲ. ಲೈಸೆನ್ಸ್ ಇಲ್ಲದೆ ಕಂಪನಿಗಳು ನಕಲಿ ಬೀಜ ಮಾರಾಟ ಮಾಡುತ್ತಿವೆ. ಓದಲು ಬಾರದ ರೈತರಿಗೆ ಕಂಪನಿಗಳು ಅನ್ಯಾಯ ಮಾಡುತ್ತಿವೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಕುಮಾರ್ ಒತ್ತಾಯ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಈಶ್ವರಪ್ಪ, ನಕಲಿ ಬಿತ್ತನೆ ಬೀಜ ಮಾರಾಟ ಮಾಡುವುದು ಆಘಾತಕಾರಿ ವಿಷಯ. ರೈತರಿಗೆ ಮೋಸ ಮಾಡುವ ಯಾವುದೇ ಕಂಪನಿಗಳನ್ನು ಬಿಡುವುದಿಲ್ಲ. ಬಿತ್ತನೆ ಬೀಜ ಆಗಲಿ ಅಥವಾ ಗೊಬ್ಬರದಲ್ಲಿಯೇ ಆಗಲಿ ಯಾರೇ ಮೋಸ ಮಾಡಿದರೂ ಅಂತಹ ಕಂಪನಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಎಷ್ಟೇ ಪ್ರಭಾವಿಗಳಾದರೂ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಂಚರಾಜ್ಯಗಳ ಸೋಲು ಕಾಂಗ್ರೆಸ್‍ಗೆ ಬದಲಾವಣೆ ಆಗೋದಕ್ಕೆ ಪಾಠ: ಸತೀಶ್ ಜಾರಕಿಹೊಳಿ
ಈ ಬಗ್ಗೆ ಶೀಘ್ರವೇ ಕೃಷಿ ಇಲಾಖೆ, ಸಚಿವರ ಜೊತೆ ಪರಿಷತ್ ಸದಸ್ಯರ ಸಭೆ ಮಾಡಿ ಅಂತಹ ಕಂಪನಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.