ಬಾಂಬೇ ಐಐಟಿ ಕ್ಲಾಸ್ ರೂಮ್‍ಗೆ ಎಂಟ್ರಿ ಕೊಟ್ಟ ಹಸು – ವಿಡಿಯೋ

Public TV
1 Min Read
MUMBAI IIT COW

ಮುಂಬೈ: ಇತ್ತೀಚೆಗೆ ನಗರದ ಐಐಟಿ ಕ್ಯಾಂಪಸ್ ಒಳಗಡೆ ಜೋಡಿ ಎತ್ತುಗಳು ಬಂದು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದವು. ಇದರ ಬೆನ್ನಲ್ಲೇ ದಾರಿ ತಪ್ಪಿದ ಹಸುವೊಂದು ತರಗತಿಯೊಳಗೆ ಆಗಮಿಸಿದೆ.

ಮುಂಬೈನ ಪ್ರತಿಷ್ಠಿತ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಈ ಘಟನೆ ನಡೆದಿದ್ದು, ಹಸು ತರಗತಿಗೆ ಬಂದಿದ್ದಾಗ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಜೊತೆಗೆ ‘ಪ್ರವೇಶಾತಿ ಪರೀಕ್ಷೆಯನ್ನು ಬರೆಯದೆ ಐಐಟಿ ಮುಂಬೈ ತರಗತಿಗೆ ಹಸು ಪ್ರವೇಶಿಸಿದೆ’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಡಿಯೋ 20 ಸೆಕೆಂಡುಗಳಿದ್ದು, ತರಗತಿ ನಡೆಯುತ್ತಿದ್ದಾಗ ಹಸು ದಾರಿ ತಪ್ಪಿ ಉಪನ್ಯಾಸ ನೀಡುವ ಸಭಾಂಗಣವನ್ನು ಪ್ರವೇಶಿಸಿದೆ. ಅಷ್ಟೇ ಅಲ್ಲದೇ ಹೊರಗೆ ಹೋಗಲು ತಿಳಿಯದೆ ತರಗತಿಯಲ್ಲೇ ತಿರುಗಾಡಿದೆ. ಈ ವೇಳೆ ಹಸು ತಮ್ಮ ಬಳಿ ಬರುತ್ತಿದ್ದಂತೆ ವಿದ್ಯಾರ್ಥಿಗಳು ತಾವು ಕುಳಿತಿದ್ದ ಸ್ಥಳದಿಂದ ಎದ್ದು ಓಡಿ ಹೋಗಿದ್ದಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಸುವನ್ನು ತರಗತಿಯಿಂದ ಹೊರಗೆ ಹಾಕಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಹೊರಗಡೆ ಭಾರೀ ಮಳೆಯಾಗುತ್ತಿರುವುದರಿಂದ ಹಸು ಆಶ್ರಯಕ್ಕಾಗಿ ಕಟ್ಟಡವನ್ನು ಪ್ರವೇಶಿಸಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತ ಮಂಡಳಿ, ಕ್ಯಾಂಪಸ್ ನಲ್ಲಿ ಮಾನವ ಹಸುಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ. ಕ್ರಮಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಹಾಗೂ ಎನ್‍ಜಿಒ, ಪ್ರಾಣಿದಯಾ ಸಂಘದ ನೆರವು ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *