– ಸರ್ಕಾರ ಕಿತ್ತೊಗೆಯಲು ಸಮನ್ವಯದಿಂದ ಕೆಲಸ ಎಂದ ಬಿಜೆಪಿ ರಾಜ್ಯಾಧ್ಯಕ್ಷ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜೆಡಿಎಸ್ ಜೊತೆಗೆ ಸಮನ್ವಯದಿಂದ, ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಹೇಳಿದ್ದಾರೆ.
ಇಂದು ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ಹಿರಿಯೂರು ಹಾಗೂ ಧಾರವಾಡ ಉಪಚುನಾವಣೆ ಹಾಗೂ ನಾಲ್ಕು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಶೀಘ್ರವೇ ಬಿಜೆಪಿ-ಜೆಡಿಎಸ್ ಮಧ್ಯೆ ಸಮನ್ವಯ ಸಮಿತಿ ರಚನೆ: ಹೆಚ್‌ಡಿಕೆ
ಬಿಜೆಪಿ ಮೂರು ಕಡೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಎಲ್ಲದಕ್ಕೂ ಜೆಡಿಎಸ್ ಸಹಕಾರ ಕೇಳಿದ್ದೇನೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮನ್ವಯ ಸಮಿತಿ ರಚಿಸುವ ಕುರಿತು ಮಾತುಕತೆ ನಡೆಸಲಾಗಿದೆ. ಸಮಿತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇರಲಿದ್ದಾರೆ. ಜೆಡಿಎಸ್‍ನಿಂದ ಕುಮಾರಸ್ವಾಮಿ ಇರಲಿದ್ದಾರೆ. ಇದರ ಜೊತೆಗೆ ಮತ್ತೊಬ್ಬರ ಹೆಸರು ಸೂಚಿಸಿ ಎಂದು ಹೇಳಿರುವುದಾಗಿ ತಿಳಿಸಿದರು.
ನಮ್ಮ ಎಲ್ಲಾ ಮಾತಿಗೆ ಕುಮಾರಸ್ವಾಮಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಸಮಿತಿಯಲ್ಲಿ ಆದಷ್ಟು ಕಡಿಮೆ ಇರಬೇಕು ಎಂದು ಹೇಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗ್ರವಾಲ್ ಅವರೊಂದಿಗೂ ಚರ್ಚಿಸಲಾಗಿದೆ ಎಂದರು.
ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಹಾಗೂ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡಿದ್ದೇವೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಪೇಕ್ಷೆಯಂತೆ ನಾವೆಲ್ಲ ಒಂದಾಗಿ ಹೋಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ
ಗೊಂದಲಕ್ಕೆ ಅವಕಾಶ ಇಲ್ಲ
ಹಿರಿಯೂರು ಕ್ಷೇತ್ರದ ಉಪಚುನಾವಣೆ ಸಂಬಂಧ ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಅಭಿಪ್ರಾಯವನ್ನೂ ಹೇಳಿದ್ದೇವೆ. ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಗೆಲುವು ಸಾಧಿಸಿದೆ. ಹಿರಿಯೂರು ಮತ್ತು ಧಾರವಾಡ ಉಪಚುನಾವಣೆಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ ಗೆಲುವಿಗೆ ಕೆಲಸ ಮಾಡುತ್ತೇವೆ. ಹಿಂದೆ ಆದ ತಪ್ಪು ತಿದ್ದಿಕೊಂಡು ಹೋಗಬೇಕು. ಎರಡೂ ಕಡೆ ನಾವು ಗೆಲ್ಲಬೇಕು ಎಂದು ಹೇಳಿದರು. ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬ ಬಗ್ಗೆ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಜಿಬಿಎ, ಜಿಲ್ಲಾ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಮನಸ್ಸಿಲ್ಲ. ರಾಜ್ಯ ಸರ್ಕಾರ ಈಗ ಎಸ್‍ಐಆರ್ ಇಟ್ಟುಕೊಂಡು ಮತ್ತೆ ಜಿಬಿಎ ಚುನಾವಣೆ ಮುಂದೂಡಲು ನೋಡುತ್ತಿದೆ. ಇದು ದುರ್ದೈವ. ಸಚಿವ ಸಂಪುಟ ವಿಸ್ತರಣೆ ಮಾಡುವ ಮಾನಸಿಕ ಸ್ಥಿತಿಯಲ್ಲೂ ಸರ್ಕಾರ ಇಲ್ಲ ಎಂದು ಆಕ್ಷೇಪಿಸಿದರು.
