ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ನಗರದ ವಿರುಪಾಪುರ ತಾಂಡ ವ್ಯಾಪ್ತಿಯ ಹಿರೇಜಂತಕಲ್ ಈರಣ್ಣ ದೇವರ ಗುಡ್ಡದ ಹಿಂಬದಿಯ ಬಂಡೆಯಲ್ಲಿ ವಿಜಯನಗರ ಸಾಮ್ರಾಜ್ಯದ (Vijayanagar Empire) ರಾಜ ಶ್ರೀಕೃಷ್ಣದೇವರಾಯನ (ShriKrishnadevaraya) ಕಾಲದ ಶಿಲಾಶಾಸನವೊಂದು ಪತ್ತೆಯಾಗಿದೆ.
ಈ ಕುರಿತು ಚಾರಣ ಬಳಗದ ಸಂಚಾಲಕ ದಂತವೈದ್ಯ ಡಾ.ಶಿವಕುಮಾರ್ ಮಾಲಿಪಾಟೀಲ ಅವರು ಮಾಹಿತಿ ನೀಡಿದ್ದಾರೆ. ಗಂಗಾವತಿ ಚಾರಣ ಬಳಗ ತಂಡ ಈ ಶಿಲಾಶಾಸನವನ್ನು ಪತ್ತೆ ಮಾಡಿದೆ. ಈ ಶಾಸನವನ್ನ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಪರಿಶೀಲಿಸಿ ಅಧ್ಯಯನ ನಡೆಸಿದ್ದು, ಈ ಶಾಸನದಲ್ಲಿ 13 ಸಾಲುಗಳಲ್ಲಿದ್ದು, ಕನ್ನಡ ಭಾಷೆಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳಿವೆ. ನಮಸ್ತುಂಗ ಶಿರಶ್ಚುಂಬಿ ಎಂಬ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ಈ ಶಾಸನ ಶಾಲಿವಾಹನ 1448ನೇ ಸಂವತ್ಸರದ ಮಾಘ ಶುದ್ಧ 7ರ ಕಾಲವನ್ನು ಉಲ್ಲೇಖಿಸುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಐಪಿಎಲ್ ಉದ್ಘಾಟನೆ – ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2,000 ಪೊಲೀಸರ ಭದ್ರತೆ
ಇದು ಪ್ರಸ್ತುತ ಸಾಮಾನ್ಯ ಶಕೆ 1,527ಕ್ಕೆ ಸರಿ ಹೊಂದಲಿದೆ. ಹಾಗಾಗಿ ಈ ಶಾಸನ 16ನೇ ಶತಮಾನಕ್ಕೆ ಸಂಬಂಧಪಟ್ಟಿದೆ. ಈ ಶಾಸನದಲ್ಲಿ ಶ್ರೀ ಮನ್ಮಾಹಾರಾಜಾಧಿರಾಜ ಪರಮೇಶ್ವರ ವೀರಪ್ರತಾಪ ಕೃಷ್ಣರಾಯರ ಆಳ್ವಿಕೆ ಕಾಲದಲ್ಲಿ ಆನೆಗೊಂದಿ ಮಾಗಣೆಯನ್ನು ಯಾವುದೋ ವ್ಯಕ್ತಿಯ (ಅಕ್ಷರ ಸವೆದಿವೆ) ಮಗ ಪಾಲಿಸುತ್ತಿರುವಾಗ, ಭದ್ರಯ್ಯನ ಮಗ ಗಂಧದ ಸೂರಯ್ಯನು ವಿರುಪಾಪುರ ಸೀಮೆಯ ಮಲ್ಲಿಕಾರ್ಜುನ ದೇವರಿಗೆ ಮತ್ತು ಕೆಲವು ಬ್ರಾಹ್ಮಣರಿಗೆ ಭೂಮಿ ದಾನ ನೀಡಿದ ಬಗ್ಗೆ ತಿಳಿಸುತ್ತಿದೆ ಎನ್ನಲಾಗಿದೆ.
ಇನ್ನೂ ಶಾಸನದ ಕೆಳ ಸಾಲುಗಳು ಸವೆದಿರುವುದರಿಂದ ಹೆಚ್ಚಿನ ವಿಷಯ ಸ್ಪಷ್ಟವಾಗುತ್ತಿಲ್ಲ. ಗಂಗಾವತಿ ನಗರದಲ್ಲಿ ಈಗಾಗಲೇ ವಿಜಯನಗರದ ಪ್ರೌಢದೇವರಾಯ ಮತ್ತು ಸದಾ ಶಿವದೇವರಾಯನ ಶಾಸನಗಳು ದೊರೆತಿದ್ದವು. ಈಗ ಕೃಷ್ಣದೇವರಾಯನ ಕಾಲದ ಶಾಸನ ದೊರೆತಿರುವುದು ಮಹತ್ವದ ಸಂಗತಿಯಾಗಿದೆ. ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಇಂದು IPL ಉದ್ಘಾಟನಾ ಪಂದ್ಯ: ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್, ಎಲ್ಲಿ ಪಾರ್ಕ್ ಮಾಡ್ಬೋದು?

