ಬ್ಯಾಂಕಾಕ್: ದೈತ್ಯ ಹೆಬ್ಬಾವೊಂದು ಹುಂಜವನ್ನ ನುಂಗಿ ನಂತರ ಅದನ್ನ ಬಾಯಿಂದ ಹೊರಹಾಕುವ ಮೈ ಜುಮ್ಮೆನಿಸೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
Advertisement
ಥೈಲ್ಯಾಂಡಿನ ಪಾತುಮ್ ಥಾನಿ ಎಂಬಲ್ಲಿ ರೈತ ನುಟ್ ವಟ್ಟಾನಾ ಎಂಬವರು ತನ್ನ ಹಿತ್ತಲಿನಿಂದ ಎರಡು ಹುಂಜಗಳು ಕಾಣೆಯಾಗಿವೆಯಲ್ಲಾ ಅಂತ ತಲೆಕೆಡಿಸಿಕೊಂಡಿದ್ರು. ಮೊದಲಿಗೆ ಅವು ತಪ್ಪಿಸಿಕೊಂಡಿರಬಹುದು ಎಂದು ಊಹಿಸಿದ್ದರು. ಆದ್ರೆ ಛಾವಣಿ ಮೇಲೆ 15 ಅಡಿ ಉದ್ದದ ದೈತ್ಯ ಹೆಬ್ಬಾವೊಂದು ಹೊಟ್ಟೆ ಊದಿಸಿಕೊಂಡಿ ನೇತಾಡ್ತಿರೋದನ್ನ ಕಂಡು ದಂಗಾಗಿದ್ರು.
Advertisement
Advertisement
ನಂತರ ರೈತ ಉರಗ ರಕ್ಷಕರನ್ನ ಸಂಪರ್ಕಿಸಿ ಸ್ಥಳಕ್ಕೆ ಕರೆಸಿದ್ರು. ಉರಗ ತಜ್ಞರು ಬಂದು ಹಾವು ನುಂಗಿದ್ದ ಹುಂಜವನ್ನ ಹೊರಕ್ಕೆ ಉಗುಳುವಂತೆ ಮಾಡಿದ್ದಾರೆ. ಹಾವನ್ನ ನೆಲದ ಮೇಲೆ ಮಲಗಿಸಿ ರಾಡ್ ನಿಂದ ಆಗಾಗ ಸವರಿ ಹುಂಜವನ್ನ ಉಗುಳುವಂತೆ ಮಾಡಿದ್ದಾರೆ. ಮೊದಲಿಗೆ ಹಾವಿನ ಬಾಯಲ್ಲಿ ಹುಂಜದ ಕಾಲು ಮಾತ್ರ ಕಾಣುತ್ತದೆ. ಆದ್ರೆ ನಂತರ ಹಾವು ಬಾಯಗಲಿಸಿದಾಗ ಸತ್ತ ಹುಂಜದ ದೇಹ ಹೊರಬರೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
ಈ ಘಟನೆ ಡಿಸೆಂಬರ್ 27ರಂದು ನಡೆದಿದ್ದು, ಕಾಣೆಯಾಗಿದ್ದ ಮತ್ತೊಂದು ಹುಂಜವೂ ಹತ್ತಿರದಲ್ಲೇ ಸತ್ತುಬಿದ್ದಿತ್ತು ಎಂದು ರೈತ ಹೇಳಿದ್ದಾರೆ.
ಹೆಬ್ಬಾವುಗಳು ಸಾಮಾನ್ಯವಾಗಿ ಇಷ್ಟು ಗಾತ್ರದ ಹುಂಜವನ್ನ ತಿಂದಾಗ ಅದು ಜೀರ್ಣವಾಗಲು 2 ವಾರ ಬೇಕಾಗುತ್ತದೆ. ಹಾವಿಗೆ ಯಾರೂ ತೊಂದರೆ ಮಾಡದಿದ್ದರೆ ಅದು ಕೆಲವು ವಾರಗಳ ಕಾಲ ಯಾವುದೇ ಆಹಾರವಿಲ್ಲದೆ ಬದುಕುತ್ತದೆ. ಆದ್ರೆ ಈ ಹಾವಿನಿಂದ ಹುಂಜವನ್ನ ಉಗುಳಿಸಿದ ಕಾರಣ ಅದು ಮತ್ತೆ ಆಹಾರ ಹುಡುಕಬೇಕಾಗುತ್ತದೆ.
ಹಾವಿನ ಬಾಯಿಂದ ಹುಂಜ ಉಗುಳಿಸಿದ ನಂತರ ಉರಗ ರಕ್ಷಕರು ಅದಕ್ಕೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ನೀಡಿ ನಂತರ ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
https://www.youtube.com/watch?v=y7TufLHI798