ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್(Sting Operation) ವಿವಾದವು ಇದೀಗ ಸಚಿವ ಸಂಪುಟ ಸಭೆಯಲ್ಲೂ(Cabinet Meeting) ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಹಲವು ಸಚಿವರು ಪ್ರಕರಣದ ಸತ್ಯಾಸತ್ಯತೆ ಹೊರತರಲು ವಿಶೇಷ ತನಿಖಾ ತಂಡ (SIT) ರಚನೆ ಮಾಡಲೇಬೇಕೆಂದು ಬಲವಾದ ಒತ್ತಡ ಹೇರಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರನ್ನು ರಾಜಕೀಯವಾಗಿ ಹೇಗೆ ಎದುರಿಸಬೇಕು ಮತ್ತು ಈ ವಿವಾದವನ್ನು ಯಾವ ದಿಕ್ಕಿನಲ್ಲಿ ತನಿಖೆಗೆ ಒಳಪಡಿಸಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಅಂತಿಮವಾಗಿ ಎಸ್ಐಟಿ ರಚನೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಹಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವರುಗಳ ಆಕ್ರೋಶ, ಒತ್ತಡ ಮತ್ತು ವಾದಗಳನ್ನು ಹೆಚ್ಚು ಮಾತನಾಡದೆ ಆಲಿಸಿದ ಡಿ.ಕೆ. ಶಿವಕುಮಾರ್ ಬಹುತೇಕ ಮೌನಕ್ಕೆ ಶರಣಾಗಿದ್ದರು ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಎಲ್ಲರೂ ಬಹಿರಂಗ ಹೇಳಿಕೆ ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಸರ್ಕಾರದ ಪರವಾಗಿ ಕೇವಲ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಮಾತ್ರ ಅಧಿಕೃತವಾಗಿ ಮಾತನಾಡಲಿ ಎಂದು ಸಂಪುಟದಲ್ಲಿ ಸಲಹೆ ನೀಡಲಾಗಿದೆ.
ಯಾರೇ ತಪ್ಪು ಮಾಡಿದ್ದರೂ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿಈ ಸ್ಟಿಂಗ್ ಆಪರೇಷನ್ನ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರೇ ಯಾಕೆ ಇರಬಾರದು? ಎಂದು ನೇರ ಶಂಕೆ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಪ್ರಕರಣದ ಬಗ್ಗೆ ಸಮಗ್ರ ಹಾಗೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

