– ಜಲಜೀವನ್ ಮಿಷನ್ ಬಾಕಿ ಹಣಕ್ಕೆ ಸಂಸದ ಇ.ತುಕರಾಂ ಮನವಿ
ನವದೆಹಲಿ: ಜಲಜೀವನ್ ಮಿಷನ್, ರೈತರ ವಿಮೆ, ಬೆಳ ನಷ್ಟ ಸೇರಿದಂತೆ ಲೋಕಸಭೆಯಲ್ಲಿಂದು (Loksabha) ರಾಜ್ಯ ಸಂಸದರು ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ಲೋಕಸಭೆ ಶೂನ್ಯ ಅವಧಿಯಲ್ಲಿ ಬಿಜೆಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Poojary) ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಮಳೆಯಿಂದಾಗಿ ಹಾಳಾಗಿರುವ ಕಾಳಮೆಣಸು, ಅಡಿಕೆ ಬೆಳೆಗಾರರಿಗೆ ಸಕಾಲಕ್ಕೆ ಬೆಳೆ ವಿಮೆ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ 39,000 ರೈತರಿಗೆ ಬೆಳೆ ವಿಮೆ ಸಿಕ್ಕಿಲ್ಲ, ಕೆಲವು ಕಡೆ ಬೆಳೆ ನಷ್ಟಕ್ಕೆ ಕಟ್ಟಿದ ಪ್ರೀಮಿಯಂ ಹಣವೂ ಬಂದಿಲ್ಲ, ಬೆಳೆ ವಿಮೆ ಸಕಾಲಕ್ಕೆ ಬಾರದ ಹಿನ್ನೆಲೆ ಆಕ್ರೋಶದಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಕಾರ್ಯದರ್ಶಿಯಿಂದ ವರದಿ ತರಿಸಿಕೊಂಡು ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ಕೋರಿದರು.ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ಅವಹೇಳನ; ಮೂವರು ಅರೆಸ್ಟ್ – ಯುವಕರು ಕೆಲಸ ಮಾಡ್ತಿದ್ದ ಮಳಿಗೆಗಳ ಮುತ್ತಿಗೆಗೆ ಯತ್ನ
ಮೆಕ್ಕೆಜೋಳ ಜೋಳ ವಿಚಾರಕ್ಕೆ ಸಂಬಂಧಿಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಮಾತನಾಡಿ, ಬೆಲೆ ನಿಯಂತ್ರಣ ಸಂಬಂಧ ಮಧ್ಯಪ್ರವೇಶ ಮಾಡಲು ಕೇಂದ್ರಕ್ಕೆ ಮನವಿ ಮಾಡಿದರು. ಕರ್ನಾಟಕವೂ 32 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದೆ, ಕಿಂಟ್ವಾಲ್‌ಗೆ 2,400 ರೂ. ಎಂಎಸ್‌ಪಿ ನಿಗದಿ ಮಾಡಿದ್ದರು. ಆದರೆ ಆ ಬೆಲೆಗೆ ಮಾರಾಟವಾಗುತ್ತಿಲ್ಲ. ಬೆಂಬಲ ಬೆಲೆಗಿಂತ ಕಡಿಮೆ ಬೆಲೆ ಮಾರಾಟ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಈ ಹಿನ್ನೆಲೆ ಆಮದು ನಿರ್ಬಂಧಿಸಿ, ಖರೀದಿ ಕೇಂದ್ರಗಳನ್ನು ಹೆಚ್ಚಿಸಲು ಕೇಳಿದರು.
ಪ್ರಶ್ನೋತ್ತರ ಕಲಾಪದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಬಾಕಿ ಉಳಿದ ಹಣ ಬಿಡುಗಡೆ ಬಗ್ಗೆ ಸಂಸದ ಇ.ತುಕಾರಾಂ (E Tukaram) ಪ್ರಶ್ನೆ ಕೇಳಿದರು. ಯೋಜನೆ ಅಡಿ ಸುಮಾರು 13,000 ಕೋಟಿ ರೂ. ಬಿಡುಗಡೆ ಮಾಡಬೇಕಿದೆ, ಈ ಹಣ ಯಾವಾಗ ಬಿಡುಗಡೆ ಮಾಡಲಾಗುವುದು ಎಂದು ಕೇಳಿದರು.
ಪ್ರಶ್ನೆಗೆ ಉತ್ತರಿಸಿದ ಜಲಶಕ್ತಿ ಸಚಿವ ಸಿಆರ್ ಪಾಟೀಲ್, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಬಿಡುಗಡೆ ಆಗಿರುವ ಹಣದ ಬಳಕೆ ಪ್ರಮಾಣ ಪತ್ರ ನೀಡಿಲ್ಲ. ಬಳಕೆ ಪ್ರಮಾಣ ಪತ್ರ ನೀಡದೇ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ, ಈ ಬಗ್ಗೆ ಕರ್ನಾಟಕ ಸಿಎಂ ಮತ್ತು ಡಿಸಿಎಂ ಜೊತೆಗೆ ಮಾತುಕತೆ ನಡೆದಿದೆ. ನಾವು ಅವರಿಗೆ ಪತ್ರದ ಮೂಲಕವೂ ತಿಳಿಸಿದ್ದೇವೆ. ಮುಂದಿನ ವಾರವೂ ಒಂದು ಸಭೆ ನಡೆಯಲಿದೆ. ಪ್ರಮಾಣ ಪತ್ರ ನೀಡಿದ ಬಳಿಕ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.ಇದನ್ನೂ ಓದಿ: 1,000 ಅಡಿ ಪ್ರಪಾತಕ್ಕೆ ಉರುಳಿದ ಟ್ರಕ್ – ಅಸ್ಸಾಂನ 18 ಕಾರ್ಮಿಕರ ದುರ್ಮರಣ

