Bengaluru City

ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪ್ರಕಟಣೆಗಳಿಗೆ ಬ್ರೇಕ್‌ ಹಾಕಿದ ರಾಜ್ಯ ಸರ್ಕಾರ

Published

on

Share this

– ಮೈಸೂರು ಜಿಲ್ಲೆಯ ಈ ಹಿಂದಿನ ಡಿಸಿ-ಶಾಸಕರ ಕಿತ್ತಾಟ ಪ್ರಕರಣದ ಹಿನ್ನೆಲೆಯಲ್ಲಿ ಸುತ್ತೋಲೆ ಪ್ರಕಟ
– ವೈಯಕ್ತಿಕ ಸೋಷಿಯಲ್‌ ಮೀಡಿಯಾ handle ಬಳಸುವ ಅಧಿಕಾರಿಗಳಿಗೂ ಎಚ್ಚರಿಕೆ

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಖಡಕ್‌ ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ರಾಜ್ಯದ ಅಧಿಕಾರಿಯು ನಂಬಿಕಾರ್ಹ (Bonafide) ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದಕ್ಕೆ ಕಡಿವಾಣ ಹಾಕಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹತ್ವದ ಸುತ್ತೋಲೆ ಹೊರಡಿಸಿ ಖಡಕ್‌ ಆದೇಶ ನೀಡಿದ್ದಾರೆ.

ಸುತ್ತೋಲೆ ಯಾಕೆ?: ಶಾಸಕ ಸಾ.ರಾ.ಮಹೇಶ್ ವರ್ಸಸ್ ಐಎಎಸ್ ರೋಹಿಣಿ ಸಿಂಧೂರಿ ಬಹಿರಂಗ ಕಿತ್ತಾಟ ವಿಚಾರ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಇದಲ್ಲದೇ ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರು ರೋಹಿಣಿ ಸಿಂಧೂರಿ ಹೆಸರು ಹೇಳದೇ ಮೈಸೂರಿ‌ನ ಹಿಂದಿನ ಡಿಸಿ ಎಂದು ವಿಷಯ ಪ್ರಸ್ತಾಪಿಸಿದ್ದರು.

ಆ ಬಗ್ಗೆ ಕಟ್ಟುನಿಟ್ಟಾಗಿ ಸೂಚನೆ ಕೊಡಲು ಮುಖ್ಯಕಾರ್ಯದರ್ಶಿಗೆ ಸೂಚಿಸುವುದಾಗಿ ಕಂದಾಯ ಸಚಿವ ಅಶೋಕ್ ಹೇಳಿದ್ದರು. ಈ ಬೆನ್ನಲ್ಲೇ ಮುಖ್ಯಕಾರ್ಯದರ್ಶಿಯಿಂದ ಮಹತ್ವದ ಸುತ್ತೋಲೆ ಹೊರಡಿಸಿ ಖಡಕ್ ಆದೇಶ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲೇನಿದೆ?: ಸರ್ಕಾರಿ ಅಧಿಕಾರಿಗಳು ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇಂತಹ ಪ್ರಸಂಗಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ ಹಾಗೂ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುವಂತದ್ದಾಗಿರುವುದರಿಂದ ಅಧಿಕಾರಿಗಳು ಇಂತಹ ನಡೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದುದರಿಂದ ಅಧಿಕಾರಿಯು ನಂಬಿಕಾರ್ಹ (Bonafide) ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ನಿಯಮಗಳನ್ನು ಗಮನಕ್ಕೆ ತಂದ ಮುಖ್ಯಕಾರ್ಯದರ್ಶಿ: ಅಖಿಲ ಭಾರತ ಸೇವೆಗಳು (ನಡತೆ) ನಿಯಮಗಳು, 1968ರ ನಿಯಮ 17ರಲ್ಲಿನ ಅವಕಾಶ ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ನ್ನು‌ ಈ ಸುತ್ತೋಲೆಯಲ್ಲಿ ಮುಖ್ಯಕಾರ್ಯದರ್ಶಿಗಳು ಉಲ್ಲೇಖಿಸಿದ್ದಾರೆ.

ಏನು ಮಾಡಬಾರದು?: ಕರ್ನಾಟಕ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಕಾರ್ಯನೀತಿ ಅಥವಾ ಕ್ರಮವನ್ನು ಟೀಕಿಸುವುದು, ಯಾರೇ ಸರ್ಕಾರಿ ನೌಕರನು ಆಕಾಶವಾಣಿ ಪ್ರಸಾರದಲ್ಲಾಗಲಿ ಅಥವಾ ದೂರದರ್ಶನದ ಕಾರ್ಯಕ್ರಮದಲಾಗಲೀ ಅಥವಾ ಯಾವುದೇ ಸಾರ್ವಜನಿಕ ಮಾಧ್ಯಮದಲ್ಲಿ ವಾಸ್ತವ ಹೇಳಿಕ ಅಥವಾ ಅಭಿಪ್ರಾಯ ನೀಡುವುದಾಗಲೀ ಅವನ ಹೆಸರಿನಲ್ಲಿ ಅಥವಾ ಅನಾಮಧೇಯವಾಗಿ ಗುಪ್ತನಾಮದಲ್ಲಿ ಅಥವಾ ಬೇರೊಬ್ಬನ ಹೆಸರಿನಲ್ಲಿ ಪ್ರಕಟಿಸಲಾದ ಇತರ ಯಾವುದೇ ದಸ್ತಾವೇಜಿನಲ್ಲಿ ಅಥವಾ ಪತ್ರಿಕೆಗೆ ಬರೆದ ಯಾವುದೇ ಪತ್ರದಲ್ಲಿ ಅಥವಾ ಯಾವುದೇ ಸಾರ್ವಜನಿಕ ಹೇಳಿಕೆಯಲ್ಲಿ ಮಾಡುವಂತಿಲ್ಲ.

ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತಹ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದಲ್ಲ.

ಸರ್ಕಾರಿ ನೌಕರರ ಕೃತ್ಯಗಳ ಮತ್ತು ನಡತೆಯ ಸಮರ್ಥನೆಗಾಗಿ ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾರೇ ಸರ್ಕಾರಿ ನೌಕರನು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೋ ಆ ಯಾವುದೇ ಅಧಿಕೃತ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರ ಹೋಗತಕ್ಕದ್ದಲ್ಲ.

ಎಚ್ಚರ ತಪ್ಪಿದರೆ ಕ್ರಮ ಖಚಿತ: ಮೇಲಿನ ನಿಯಮಗಳಲ್ಲಿನ ಅವಕಾಶಗಳಿಗೆ ವ್ಯತಿರಿಕ್ತವಾಗಿ ಯಾವುದೇ ಅಧಿಕಾರಿ ಸರ್ಕಾರದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಸರ್ಕಾರಿ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವುದು ಸೇರಿದಂತೆ ಇತರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿದ್ದಲ್ಲಿ ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದೆ. ಆದರೆ, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ನಿಮ್ಮ ಖಾತೆ ಬೇಡ, ಸರ್ಕಾರದ ಸೋಷಿಯಲ್‌ ಮೀಡಿಯಾ ಖಾತೆ ಬಳಸಿ!: ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಗಳನ್ನಾಗಿರಿಸಿಕೊಂಡು ಇಲಾಖೆಯ/ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳ ವ್ಯಯಕ್ತಿಕ ಸಾಧನಗಳಂಬಂತೆ ಪುದರ್ಶಿಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ ಅಥವಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ, ಅಧಿಕಾರಿಗಳು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸದೇ ಸರ್ಕಾರದ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು (handles) ಮಾತ್ರ ಬಳಸಿಕೊಳ್ಳಬೇಕು ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿ ಖಡಕ್ ಆದೇಶ ನೀಡಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications