ಪಣಜಿ: ತನ್ನ ಸ್ವಂತ 4 ವರ್ಷದ ಮಗನನ್ನು ಕೊಂದು ಅಪಾರ್ಟ್‌ಮೆಂಟ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಗಳೂರಿನ CEO ಸುಚನಾ ಸೇಠ್ (Suchana Seth) ಸಿಕ್ಕಿಬಿದ್ದ ರೋಚಕ ಕಥೆ ಇಲ್ಲಿದೆ.
Advertisement
ಜನವರಿ 6 ರಂದು ಸುಚನಾ ಸೇಠ್, ಉತ್ತರ ಗೋವಾದ (Goa) ಕ್ಯಾಂಡೋಲಿಮ್‌ನಲ್ಲಿ ತನ್ನ ಮಗನೊಂದಿಗೆ ಸರ್ವಿಸ್ ಅಪಾರ್ಟ್‌ಮೆಂಟ್ (Service Apartment) ಒಂದರಲ್ಲಿ ಬಾಡಿಗೆಗೆ ಇದ್ದಳು. ಒಂದೆರಡು ದಿನ ಅಲ್ಲಿಯೇ ತಂಗಿದ್ದ ಸೇಠ್, ತಾನು ಯಾವುದೋ ಕೆಲಸಕ್ಕಾಗಿ ಬೆಂಗಳೂರಿಗೆ (Bengaluru) ಹೋಗಬೇಕೆಂದಿರುವೆ ಎಂದು ಅಪಾರ್ಟ್‌ಮೆಂಟ್ ಸಿಬ್ಬಂದಿಗೆ ತಿಳಿಸಿ ಟ್ಯಾಕ್ಸಿಗೆ (Taxi) ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾಳೆ.
Advertisement
Advertisement
ಈ ವೇಳೆ ಅಲ್ಲಿನ ಸಿಬ್ಬಂದಿ, ದುಬಾರಿ ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು ಬೆಂಗಳೂರಿಗೆ ವಿಮಾನದಲ್ಲಿ (Flight) ಹೋಗುವಂತೆ ಸೂಚಿಸಿದ್ದಾರೆ. ಆಗ ಸೇಠ್, ತಾನು ಟ್ಯಾಕ್ಸಿಯಲ್ಲಿಯೇ ಹೋಗಬೇಕು ಎಂದು ಹಠಕ್ಕೆ ಬಿದ್ದಳು. ಹೀಗಾಗಿ ಜನವರಿ 8 ರಂದು ಆಕೆಗೆ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಳು.
Advertisement
ಇತ್ತ ಸೇಠ್ ಹೊರಗಡೆ ಬರುತ್ತಿದ್ದಂತೆಯೇ ಅಪಾರ್ಟ್‌ಮೆಂಟ್ ಸಿಬ್ಬಂದಿ ಆಕೆ ತಂಗಿದ್ದ ಕೊಠಡಿಯನ್ನು ಕ್ಲೀನ್ ಮಾಡಲು ಹೋಗಿದ್ದಾರೆ. ಈ ವೇಳೆ ಟವೆಲ್‌ನಲ್ಲಿ ರಕ್ತದ ಕಲೆಗಳು ಇರುವುದು ಕಂಡುಬಂದಿದೆ. ಕೂಡಲೇ ಸಿಬ್ಬಂದಿ ಅಪಾರ್ಟ್‌ಮೆಂಟ್‌ನ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಕಲಾಂಗುಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತನ್ನ ಮುದ್ದಿನ ಪುತ್ರನನ್ನು ಕೊಂದ ಸುಚನಾ ಸೇಠ್ ಯಾರು?
ಸೇಠ್ ಅಪಾರ್ಟ್‌ಮೆಂಟ್‌ನಿಂದ ಹೊರಬಂದಾಗ ಆಕೆಯ ಪುತ್ರ ಕಾಣಲಿಲ್ಲ. ಕೈಯಲ್ಲಿ ಭಾರವಾದ ಸೂಟ್‌ಕೇಸ್ ಹಿಡಿದುಕೊಂಡು ಹೋಗಿರುವುದಾಗಿ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ಅಪಾರ್ಟ್ ಮೆಂಟ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪೊಲೀಸರು, ಆಕೆಗೆ ಕರೆ ಮಾಡಿ ಕರೆದು ರಕ್ತದ ಕಲೆಗಳು ಮತ್ತು ಕಾಣೆಯಾದ ಮಗನ ಬಗ್ಗೆ ಕೇಳಿದರು. ಈ ವೇಳೆ ಆಕೆ, ಪೀರಿಯೆಡ್ಸ್ ಆಗಿದ್ದು, ಅದರ ಕಲೆಗಳು ಉಂಟಾಗಿವೆ ಎಂದು ಸುಳ್ಳು ಹೇಳುವ ಮೂಲಕ ಬಚಾವ್ ಆಗಲು ಯತ್ನಿಸಿದ್ದಾಳೆ.
ಇನ್ನು ಮಗನ ಬಗ್ಗೆ ಕೇಳಿದ್ದಕ್ಕೆ ಆತ ದಕ್ಷಿಣ ಗೋವಾದ ಮಾರ್ಗೋ ಪಟ್ಟಣದಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳುತ್ತಾ ಅಲ್ಲಿನ ವಿಳಾಸವನ್ನು ನೀಡಿದ್ದಾಳೆ. ಪೊಲೀಸರು ತಕ್ಷಣವೇ ಫಟೋರ್ಡಾ ಪೊಲೀಸರ ಸಹಾಯವನ್ನು ಪಡೆದರು (ಮಾರ್ಗೋವ್ ಬಳಿ) ಮತ್ತು ಆಕೆ ನೀಡಿದ ವಿಳಾಸ ನಕಲಿ ಎಂಬುದನ್ನು ತಿಳಿದುಕೊಂಡರು. ಇತ್ತ ಸೇಠ್ ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಡ್ರೈವರ್‌ಗೆ ಇನ್ಸ್‌ಪೆಕ್ಟರ್ ಕರೆಮಾಡಿ ಬೆಂಗಳೂರಿಗೆ ಹೋಗಬೇಡ, ಬದಲಾಗಿ ಹತ್ತಿರದ ಪೊಲೀಸ್ ಠಾಣೆ ಕಡೆ ಹೋಗುವಂತೆ ಸೂಚಿಸಿದ್ದಾರೆ. ಅಂತೆಯೇ ಆತ ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಯತ್ತ ತನ್ನ ವಾಹನವನ್ನು ತಿರುಗಿಸಿದ್ದಾನೆ.
ಚಿತ್ರದುರ್ಗದ ಪೊಲೀಸರು ಮಹಿಳೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿದೆ. ನಂತರ ಕಲಾಂಗಗುಟ್ ಪೊಲೀಸ್ ತಂಡವು ಚಿತ್ರದುರ್ಗಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು ಗೋವಾಕ್ಕೆ ಕರೆತರಲಾಯಿತು. ಸದ್ಯ ಜಕಾರ್ತದಲ್ಲಿರುವ ಆರೋಪಿಯ ಪತಿ ವೆಂಕಟ್ ರಾಮನ್ ಅವರಿಗೆ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿರುವುದಾಗಿ ಕ್ಯಾಲಂಗುಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪರೇಶ್ ನಾಯ್ಕ್ ಘಟನೆಯ ಬಗ್ಗೆ ವಿವರಿಸಿದ್ದಾರೆ.