ಬೆಂಗಳೂರು: ನಗರದಲ್ಲಿ ಅದೃಷ್ಟದ ಹೆಸರಿನಲ್ಲಿ ಆಮೆಗಳ ಅಕ್ರಮ ಸಾಗಾಟ ಮಾಡುತ್ತಿರುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಬಾಯಿ ಬಾರದ ಮೂಕ ಪ್ರಾಣಿಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹಿಂಸಿಸುತ್ತಾನೆ, ಕೊಲ್ಲುತ್ತಾನೆ. ಅದ್ರಲ್ಲೂ ಈಗ ಅದೃಷ್ಟ ದುರಾದೃಷ್ಟದ ಮೂಢನಂಬಿಕೆಗೆ ಬಲಿಯಾಗುತ್ತಿರೋದು ಅಪರೂಪದ ನಕ್ಷತ್ರ ಆಮೆ.
ಹೌದು. ವನ್ಯಜೀವಿ ಘಟಕದ ಸಾಥ್ ನೊಂದಿಗೆ ರಹಸ್ಯ ಕಾರ್ಯಾಚಾರಣೆಯ ವೇಳೆ ಇಡೀ ಭಾರತದಲ್ಲಿ ಆಮೆಗಳ ಸ್ಲಗ್ಮಿಂಗ್‍ಗೆ ಮಾಸ್ಟರ್ ಮೈಂಡ್ ಬೆಂಗಳೂರಿನ ಕೆಆರ್ ರಸ್ತೆಯ ಯುಮಿನೋಪೆಟ್ ಶಾಪ್ ಅನ್ನೋದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಅಲ್ಲಿಗೆ ಖರೀದಿಯ ಸೋಗಿನಲ್ಲಿ ನಮಗೊಂದು ನಕ್ಷತ್ರ ಆಮೆ ಬೇಕು ಅಂತ ಡೀಲ್‍ಗಿಳಿದಾಗ, ನಾಲ್ಕು ಸಾವಿರಕ್ಕೆ ಚೌಕಾಸಿ ಮಾಡಿ ಪುಟ್ಟದೆರಡು ಆಮೆಗಳನ್ನು ನೀಡಿದ್ದಾರೆ. ಹೀಗೆ ಆಮೆಗಳನ್ನು ತಮ್ಮ ಕೈಗೆ ನೀಡುತ್ತಿದ್ದಂತೆ ವನ್ಯಜೀವಿ ಘಟಕ ಅಧಿಕಾರಿಗಳು, ಅರಣ್ಯ ಇಲಾಖೆ ಸಿಐಡಿ ಸೆಲ್ ಅಧಿಕಾರಿಗಳು ಎಂಟ್ರಿ ಕೊಟ್ರು. ಬಳಿಕ ಇಡೀ ಶಾಪ್ ಜಾಲಾಡಿದಾಗ ಅಧಿಕಾರಿಗಳೇ ದಂಗಾದ್ರು.
ನಕ್ಷತ್ರ ಆಮೆಯ ಬೆನ್ನು ಬಿದ್ದಿದ್ದ ಸಿಐಡಿ ಅಧಿಕಾರಿಗಳು, ಅಲ್ಲಿ ಬಿದ್ದಿದ್ದ ಹವಳದ ರಾಶಿ ಕಂಡು ಬೆಚ್ಚಿಬಿದ್ರು. ಅಲ್ಲಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 460 ಕೆಜಿ ಹವಳದ ಶೆಲ್‍ಗಳನ್ನು ಹುಡುಕಿ ಹೊರ ತೆಗೆದಿದ್ದಾರೆ. ಇದರ ಜೊತೆಗೆ ವೈಟ್ ಕ್ಯಾಟ್, ಇಲಿ, ರಾಶಿ ರಾಶಿಪುಟ್ಟ ಆಮೆ, ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಚೀನಾಕ್ಕೂ ಆಮೆಗಳನ್ನು ಹಾಗೂ ಇತರ ಪ್ರಾಣಿಗಳನ್ನು ಸ್ಮಗ್ಲಿಂಗ್ ಮಾಡಲಾಗುವ ಕಿಂಗ್ ಫಿನ್ ಈ ಶಾಪ್ ಮಾಲೀಕ ಅನ್ನೋದು ತಿಳಿದು ಬಂದಿದೆ. ಸದ್ಯ ಇಲ್ಲಿ ಕೆಲಸ ಮಾಡುವ ಚಿನ್ನಾರಾಯ್ಡು, ಗಣೇಶನ್, ವೆಲ್ಲೈ ಕಣ್ಣು ಅನ್ನೋರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.