ಕೋಲಾರ: ನಕಲಿ ವೈದ್ಯ ನೀಡಿರುವ ಚುಚ್ಚುಮದ್ದಿನಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್‍ನಲ್ಲಿ ಬುಧವಾರದಂದು ಚಿಕಿತ್ಸೆ ಪಡೆದಿರುವ ವಡ್ಡಹಳ್ಳಿ ನಿವಾಸಿಯಾದ 16 ವರ್ಷದ ಅಭಿರಾಮ್ ಮೃತಪಟ್ಟಿದ್ದಾನೆ. ಕಿವಿ ನೋವಿಗೆಂದು ಶಾರದಾ ಕ್ಲಿನಿಕ್‍ನ ನಕಲಿ ವೈದ್ಯ ನವೀನ್ ಕುಮಾರ್ ಚುಚ್ಚು ಮದ್ದು ನೀಡಿದ್ದು, ಈ ವೇಳೆ ಅಭಿರಾಮ್ ತಕ್ಷಣವೇ ಕುಸಿದು ಬಿದ್ದಿದ್ದಾನೆ. ಅದಾದ ನಂತರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ ನಂತರ ಬಾಲಕ ಮೃತಪಟ್ಟಿದ್ದಾನೆ. ಅಭಿರಾಮ್ ಮನೆಯಲ್ಲಿ ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವೈದ್ಯ ನವೀನ್ ಕುಮಾರ್ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದಾನೆ ಎಂದು ಮೃತ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆರೋಪಸಿದ್ದಾರೆ. ಈ ಕುರಿತು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್‍ನಲ್ಲಿ ಡಾ. ನವೀನ್ ಕುಮಾರ್ ಎಂಡಿ, ಎಫ್‍ಎಜಿ ಎಂದು ಹಾಗೂ ಅತನ ಪತ್ನಿ ಶ್ವೇತ ನವೀನ್ ಕುಮಾರ್ ಎಂಬಿಬಿಎಸ್‍ಯೆಂದು ಫಲಕ ಹಾಕಿಕೊಂಡಿದ್ದಾರೆ.