ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದೆ, ಆತಂಕವಿಲ್ಲದೆ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆ. ಡಿಸಿಗಳು, ಪೊಲೀಸ್ ಇಲಾಖೆ, ಪಿಯುಸಿ ಬೋರ್ಡ್ ಪರೀಕ್ಷೆಗೆ ಅಗತ್ಯ ಕ್ರಮ ತೆಗೆದುಕೊಂಡು ಪರೀಕ್ಷೆ ಯಶಸ್ವಿಯಾಗಿ ನಡೆಸುತ್ತಿದೆ. ಪಿಯುಸಿ ಎಕ್ಸಾಂ ಮುಗಿದ ಕೂಡಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಲಿದೆ. ಹೀಗಾಗಿ ಪಿಯುಸಿ ಎಕ್ಸಾಂ ನಷ್ಟೆ ಪಾರದರ್ಶಕವಾಗಿ, ಸುಗಮವಾಗಿ ನಡೆಸಲು ಕೆಲಸ ಮಾಡುವಂತೆ ಎಲ್ಲಾ ಡಿಸಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ.
ಯಾವುದೇ ಗೊಂದಲ, ಅಕ್ರಮ ಇಲ್ಲದೆ ಪರೀಕ್ಷೆ ನಸೆಸಲು ಡಿಸಿಗಳ ಸಹಕಾರ ಮುಖ್ಯ ಹೀಗಾಗಿ ಸಚಿವರೇ ಎಲ್ಲಾ ಡಿಸಿಗಳಿಗೂ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಪರೀಕ್ಷೆಗಳು ಸುಲಲಿತವಾಗಿ ಹಾಗೂ ಮುಕ್ತ ವಾತಾವರಣದಲ್ಲಿ ನಡೆಯವಂತೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ. ಇದಕ್ಕೆ ಪೊಲೀಸ್ ಇಲಾಖೆ, ಖಜಾನೆ, ಇಂಟಲಿಜೆನ್ಸ್ ಸೇರಿದಂತೆ ಎಲ್ಲ ಇಲಾಖೆಗಳೂ ಸಹಕರಿಸಿದ್ದು, ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿವೆ. ಪರೀಕ್ಷೆಗಳು ಸುಸೂತ್ರವಾಗಿ ನಿರ್ವಹಣೆಯಾಗಬೇಕಾದ ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಆಶಯಗಳು ಸಾಕಾರಗೊಳ್ಳಬೇಕಾದರೆ ಜಿಲ್ಲಾಧಿಕಾರಿಗಳ ಜವಾಬ್ದಾರಿ ಹಿರಿದಾಗಿದ್ದು, ಈ ಕುರಿತಂತೆ ಪರೀಕ್ಷಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಅಧಿಕಾರಿ/ಸಿಬ್ಬಂದಿ ಅತಿ ಜಾಗರೂಕತೆಯಿಂದ ಮತ್ತು ಹೆಚ್ಚಿನ ಜವಾಬ್ದಾರಿಯಿಂದ ತೊಡಗಿಸಿಕೊಂಡು ಪರೀಕ್ಷಾ ಕಾರ್ಯಗಳು ಸುಗಮವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಇಡುವ ಖಜಾನೆಗೆ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗಿದೆ. ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ 15 ನಿಮಿಷ ಸಮಯ ನೀಡಲಾಗಿದೆ. ಪರೀಕ್ಷಾ ಅಕ್ರಮ ತಡೆಗೆ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಾಗೃತ ದಳಗಳ ರಚನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಟ್ಟಿಂಗ್ ಸ್ಕ್ಯಾಡ್ ಇರಲಿದ್ದಾರೆ. ಪ್ರಶ್ನೆ ಪತ್ರಿಕೆ ರವಾನೆ ಮಾಡೋ ವಾಹನಕ್ಕೆ ಜಿಪಿಎಸ್ ಅಳವಡಿಕೆ ಮಾಡುವ ಕಾರ್ಯ ನಡೆಯುತ್ತಿದೆ.