ರಾಮಾಯಣ ಸಿನಿಮಾ ಮಾಡಬೇಕಂತೆ ರಾಜಮೌಳಿ- ನೆಟ್ಟಿಗರ ಒತ್ತಾಯ

Public TV
3 Min Read
rajamouli ramayan

ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಜಮೌಳಿ ಅಭಿಮಾನಿಗಳು ಅವರಿಗೆ ಹೊಸದೊಂದು ಬೇಡಿಕೆಯನ್ನು ಇಟ್ಟಿದ್ದಾರೆ.

ರಾಜಮೌಳಿಯವರು ರಾಮಾಯಣ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದಾರೆ. ಹ್ಯಾಶ್ ಟ್ಯಾಗ್‍ನೊಂದಿಗೆ ರಾಜಮೌಳಿ ಮೇಕ್ ರಾಮಾಯಣ ಎಂದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ರಮಾನಂದ ಸಾಗರ್ ಬಿಟ್ಟರೆ ಈ ಕತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಸಾಮರ್ಥ್ಯ ಇರುವುದು ರಾಜಮೌಳಿಯವರಿಗೆ ಮಾತ್ರ. ಬಾಹುಬಲಿಯಂತಹ ಕಾಲ್ಪನಿಕ ಕತೆಯನ್ನೇ ನೈಜ ಕಥೆ ಎನ್ನುಂತೆ ಕಟ್ಟಿಕೊಟ್ಟಿದ್ದೀರಿ. ಇನ್ನು ರಾಮಾಯಣ ನಿಮ್ಮ ನಿರ್ದೇಶನದಲ್ಲಿ ಹೇಗೆ ಮೂಡಿ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

ಪಾತ್ರವರ್ಗದ ಕುರಿತು ಸಹ ಹಲವರು ಚರ್ಚೆ ನಡೆಸುತ್ತಿದ್ದು, ರಾಜಮೌಳಿಯವರು ರಾಮಾಯಣ ಸಿನಿಮಾ ಮಾಡಿದರೆ ಪ್ರಮುಖ ಪಾತ್ರಗಳಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು, ಈ ವರೆಗೆ ರಾಮ, ಲಕ್ಷ್ಮಣ, ರಾವಣ, ಹನುಮಂತನ ಪಾತ್ರದ ಕುರಿತು ಪ್ರಾಮಾಣಿಕ ಚರ್ಚೆ ನಡೆದಿಲ್ಲ. ಆದರೆ ಸೀತೆಯ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ದೇಶದ ಅತ್ಯತ್ತಮ ನಿರ್ದೇಶಕರ ಪಟ್ಟಿಯಲ್ಲಿ ಎಸ್.ಎಸ್.ರಾಜಮೌಳಿ ಸಹ ಒಬ್ಬರು. ಬಾಹುಬಲಿ ಸೇರಿದಂತೆ ಹಲವು ವಿಶಿಷ್ಠ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇವರ ನಿರ್ದೇಶನದ ಚಿತ್ರಕ್ಕಾಗಿ ಹಲವು ಪ್ರಸಿದ್ಧ ನಟರು ಕಾದು ಕುಳಿತಿರುತ್ತಾರೆ. ಅಲ್ಲದೆ ನಿರ್ಮಾಪಕರು ಸಹ ಬಂಡವಾಳ ಹೂಡಲು ಹಿಂಜರಿಯುವುದಿಲ್ಲ. ಅಷ್ಟರ ಮಟ್ಟಿಗೆ ರಾಜಮೌಳಿಯವರು ತಮ್ಮ ನಿರ್ದೇಶನದ ಮೂಲಕ ಮೋಡಿ ಮಾಡುತ್ತಾರೆ.

ಬಾಹುಬಲಿಯಂತಹ ಸಿನಿಮಾ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಚಿತ್ರದ ಎರಡೂ ಭಾಗಗಳು ಹಿಟ್ ಆಗಿದ್ದವು. ಇದಾದ ಬಳಿಕ ರಾಜಮೌಳಿಯವರು ಜೂನಿಯರ್ ಎಂಟಿಆರ್ ಹಾಗೂ ರಾಮ್‍ಚರಣ್‍ತೇಜಾ ಕಾಂಬಿನೇಶನ್‍ನಲ್ಲಿ ಆರ್‍ಆರ್‍ಆರ್ ಸಿನಿಮಾ ಮಾಡುತ್ತಿದ್ದು, ಇದೂ ಸಹ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮುತ್ತಿದೆ.

ಚಿತ್ರೀಕರಣ ಭರದಿಂದ ಸಾಗಿರುವಾಗಲೇ ಕೊರೊನಾ ಮಹಾಮಾರಿಯಿಂದಾಗಿ ಲಾಕ್‍ಡೌನ್ ಘೋಷಣೆಯಾಗಿತು. ಹೀಗಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಆರಂಭವಾಗಲಿದೆ. ಅತ್ತ ಹಿಂದಿಯಲ್ಲಿ ಮರುಪ್ರಸಾರವಾದ ರಾಮಾಯಣ ಧಾರಾವಾಹಿ ಸಹ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದು, ಅತಿ ಹೆಚ್ಚು ಟಿಆರ್ ಪಿ ಗಳಿಸುವ ಮೂಲಕ ಜನಪ್ರಿಯತೆ ಗಳಿಸಿದೆ.

ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ರಾಜಮೌಳಿಯವರು ಮಾತ್ರ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಮಾಡಲಿದ್ದಾರೆಯೇ, ಇಲ್ಲವೇ ಎಂಬುದರ ಕುರಿತು ಅವರ ಉತ್ತರವನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *