ಮಂಡ್ಯ: ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಶ್ರೀರಂಗಪಟ್ಟಣ ದಸರಾಗೆ (Srirangapatna Dasara) ವಿದ್ಯುಕ್ತ ಚಾಲನೆ ದೊರಕಿದೆ.
415ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಹಿನ್ನೆಲೆ ಮಂಗಳಾರತಿ ಬಳಿಕ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಶ್ರೀರಂಗಪಟ್ಟಣದ ಕಿರಂಗೂರು ಬಳಿ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ಬಳಿಕ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ ಚಾಲನೆ ಕೊಟ್ಟರು. ಇದನ್ನೂ ಓದಿ: Dasara Special | ನವರಾತ್ರಿ ವೇಳೆ ಶಾರದಾ ಪೂಜೆ, ಅಕ್ಷರಾಭ್ಯಾಸದ ಮಹತ್ವ ಏನು?

ದಸರಾ ಆನೆ ಮಹೇಂದ್ರನ ಮೇಲೆ ಮರದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡದೇವಿಗೆ ಪುಷ್ಪಾರ್ಚನೆ ಮಾಡಲಾಯಿತು. ಮರದ ಅಂಬಾರಿ ಹೊತ್ತ ಮಹೇಂದ್ರ ಆನೆ ಜೊತೆಗೆ ಕುಮ್ಕಿ ಆನೆಗಳಾದ ಕಾವೇರಿ, ಲಕ್ಷ್ಮೀ ಹೆಜ್ಜೆ ಹಾಕಿದವು.
ವಿವಿಧ ಕಲಾತಂಡಗಳಾದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ಇದನ್ನೂ ಓದಿ: Photo Gallery | ಹೂವು ಚೆಲುವೆಲ್ಲಾ ತನ್ನದೆನ್ನುತ್ತಿದೆ.. ಸಂಗೀತ ಝೇಂಕಾರ ಮನಮುಟ್ಟುತ್ತಿದೆ – ದಸರಾ ಸೊಬಗು ಕಣ್ತುಂಬಿಕೊಳ್ಳಿ
ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿ ಹಲವರು ಭಾಗಿಯಾಗಿದ್ದರು. ಶ್ರೀರಂಗನಾಥಸ್ವಾಮಿ ದೇವಾಲಯ ಬಳಿಯ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ಸಿಗಲಿದೆ.
 


 
		 
		 
		 
		 
		
 
		 
		 
		 
		