ಬಳ್ಳಾರಿ: ನನಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪೆದ್ದ ಅಂದಿದ್ದಾರೆ. ನಾನು ಪೆದ್ದ ಎಂಬುದನ್ನು ಒಪ್ಪಿಕೊಳ್ಳುವೆ. ಆದರೆ ನೀವು ಹೇಗೆ ಮೋಸ ಮಾಡಿದ್ದೀರಾ? ವಂಚನೆ ಮಾಡಿದ್ದೀರಾ ಎಂದು ನಿಮ್ಮ ಶಿಷ್ಯಂದಿರೇ ನಿಮ್ಮ ಬುದ್ಧಿವಂತಿಕೆ ಬಗ್ಗೆ ಹೇಳಿದ್ದಾರೆ ಎಂದು ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಹೊಸಪೇಟೆಯಲ್ಲಿ ಪ್ರಚಾರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ನೀನು ಕಾಂಗ್ರೆಸ್ ಪಕ್ಷದ ನಿಷ್ಠಾವಂತರನ್ನು ತುಳಿದು ರಾಜಕಾರಣ ಮಾಡಿದ್ದೀಯಾ. ನೀನು ಎಷ್ಟು ಭ್ರಷ್ಟಾಚಾರ ಮಾಡಿದ್ದಿ ಎಂಬುದನ್ನು ನಿನ್ನ ಶಿಷ್ಯಂದಿರು ಎಂಟಿಬಿ ಮತ್ತು ಮುನಿರತ್ನ ಜನರಿಗೆ ತಿಳಿಸಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಿಮ್ಮ ಮಾತಿನಿಂದ ಜಾತಿ ಸಂಘರ್ಷ ಶುರುವಾಗುತ್ತದೆ. ರಾಮುಲುಗೆ ಹೀಗೆ ಎಂದಿದ್ದಾರೆ ಅಂತಾ ವಾಲ್ಮೀಕಿ ಸಮಾಜ ಎದ್ದು ನಿಲ್ಲುತ್ತೆ. ಆದರೆ ನಾನು ಮಾತನಾಡಿದರೆ ಕುರಬ ಸಮಾಜ ಎದ್ದು ನಿಲ್ಲುತ್ತೆ. ಹಾಗೆ ಆಗುವುದು ಬೇಡ. ಯುದ್ಧ ಏನಿದ್ದರೂ ನನ್ನ ನಿಮ್ಮ ನಡುವೆ ಇರಲಿ. ನಮ್ಮ ಮಧ್ಯೆ ಜಾತಿ ತರುವುದು ಬೇಡ ಎಂದು ಹರಿಹಾಯ್ದರು.
ನೀವು ಕಾಂಗ್ರಸ್ ಪಕ್ಷವನ್ನು ಯಾವ ಗತಿಗೆ ತಂದಿದ್ದೀರಿ ನೋಡಿ. ಈ ಹಿಂದೆ ಇದ್ದ ಜೆಡಿಎಸ್ ಪಕ್ಷದಲ್ಲಿ ಕೇವಲ ಸ್ಥಾನಮಾನ ಕೊಡದಿದಕ್ಕೆ ಪಕ್ಷವನ್ನ ಹಾಳು ಮಾಡಿದ್ದೀರಿ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಪರಮೇಶ್ವರ್ ದಲಿತ ಎನ್ನುವ ಕಾರಣಕ್ಕೆ ಅವರನ್ನು ಮೂಲೆ ಗುಂಪು ಮಾಡಿದ್ದೀರಿ. ನಿಮ್ಮ ಜೊತೆಗೆ ಈಗ ಯಾರು ಇಲ್ಲ. ನೀವು ಈಗ ಹತಾಶೆ ಭಾವನೆಯಲ್ಲಿ ಇದ್ದೀರಿ. ನೀವು ವಿರೋಧ ಪಕ್ಷದ ನಾಯಕರು ನಿಮ್ಮ ಬಾಯಿಂದ ಈ ರೀತಿಯ ಮಾತುಗಳು ಬರಬಾರದು. ನಿಮ್ಮಷ್ಟು ರಾಜಕೀಯ ಅನುಭವ ನನಗೆ ಆಗಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ ಬೀಸಿದರು.