ಬಳ್ಳಾರಿ: ಒಂದೆಡೆ ದಿವಂಗತ ಸಚಿವ ಸಿ ಎಸ್ ಶಿವಳ್ಳಿ ಸಾವಿನ ವಿಚಾರದ ಬಗ್ಗೆ ಶಾಸಕ ಶ್ರೀರಾಮುಲು ವಿರುದ್ದ ಕಾಂಗ್ರೆಸ್ ದೂರು ನೀಡುತ್ತಿದೆ. ಇನ್ನೊಂದೆಡೆ ಶಿವಳ್ಳಿ ಸಾವಿನ ಬಗ್ಗೆ ಶಾಸಕ ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ.
ಶಿವಳ್ಳಿ ಸಚಿವರಾಗಿದ್ದ ವೇಳೆ ಅವರ ಇಲಾಖೆಗೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಇತರರೂ ಕೈಹಾಕಿದ್ದರು. ಹೀಗಾಗಿ ಸಚಿವರಾಗಿದ್ದ ವೇಳೆ ಶಿವಳ್ಳಿ ಅವರು ಸಾಕಷ್ಟು ನೊಂದಿದ್ದರು ಎಂದು ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ – ಶ್ರೀರಾಮುಲು ಗಂಭೀರ ಆರೋಪ
ಅಲ್ಲದೇ, ಶಿವಳ್ಳಿ ಅವರು ಯಾವತ್ತೋ ಮಂತ್ರಿಯಾಗಬೇಕಿತ್ತು. ಅವರು ಸೀನಿಯರ್ ಶಾಸಕರಾಗಿದ್ದರು. ಆದ್ರೆ ಅವರಿಗೆ ಮಂತ್ರಿ ಸ್ಥಾನ ನೀಡದೇ ಮೈತ್ರಿ ಸರ್ಕಾರದಲ್ಲಿ ಹೊಸಬರನ್ನ ಮಂತ್ರಿ ಮಾಡಲಾಗಿತ್ತು. ಆ ಕಾರಣಕ್ಕಾಗಿ ಅವರು ನೊಂದಿದ್ದರು. ಅದನ್ನೆ ನಾನು ಹೇಳಿರುವುದು. ಆದರೆ ಕಾಂಗ್ರೆಸ್ ನಾಯಕರು ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಶಿವಳ್ಳಿ ಸಾವಿನ ಬಗ್ಗೆ ನಾನು ತಪ್ಪು ಅರ್ಥದಿಂದ ಮಾತನಾಡಿಲ್ಲವೆಂದು ಶ್ರೀರಾಮುಲು ಸ್ಪಷ್ಟಪಡಿಸಿದರು.
ಶಿವಳ್ಳಿ ಶಾಸಕರಾಗಿದ್ದ ವೇಳೆ ಬಿಜೆಪಿಗೆ ಬರಲು ರೆಡಿಯಾಗಿದ್ದರು. ಹೀಗಾಗಿ ಕುಂದಗೋಳ್ ಮತ್ತು ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಶ್ರೀರಾಮಲು ಭರವಸೆ ವ್ಯಕ್ತಪಡಿಸಿದರು.