ಚಿತ್ರದುರ್ಗ: ಗಡಿ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ಕನ್ನಡಭ್ಯಾಸ ಮಾಡೋದೆ ವಿರಳ. ಹೀಗಾಗಿ ಕನ್ನಡ ಉಳಿಸುವ ನಿಟ್ಟಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಜೊತೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯರ್ರೇನಹಳ್ಳಿ ಬಳಿ ರಾಣಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಕಟ್ಟಡಗಳನ್ನು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲು ಉದ್ಘಾಟಿಸಿದರು.
ಈ ವೇಳೆ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳು ಸಂಸ್ಕೃತಿ ಕಲಿಯಬೇಕು. ಗುರು ಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ 824 ವಸತಿ ಶಾಲೆಗಳಿದ್ದು, ಇವುಗಳಲ್ಲಿ 1.60 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ 6ರಿಂದ 10ನೇ ತರಗತಿವರೆಗೆ ಮಕ್ಕಳು ಓದುತ್ತಿದ್ದಾರೆ. ಇದೇ ಶಾಲೆಗಳಲ್ಲಿ ಪಿಯುಸಿವರೆಗೂ ವಸತಿ ಶಾಲೆ ಮಾಡಬೇಕೆಂಬ ಬೇಡಿಕೆ ಇದೆ. ಅದನ್ನ ನಾನು ಪೂರೈಸುವ ಕೆಲಸ ಮಾಡುತ್ತೇನೆ. ಜೊತೆಗೆ ವಾಲ್ಮೀಕಿ ವಸತಿ ಶಾಲೆಗಳನ್ನೂ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಯರ್ರೇನಹಳ್ಳಿಯ ಈ ವಸತಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಪರಿಶೀಲನೆ ಮಾಡಲು ಒಬ್ಬ ವೈದ್ಯರು ಹಾಗೂ ನರ್ಸ್ ನಿಯೋಜನೆ ಮಾಡಲಾಗುವುದು ಎಂದರು.
ಹಾಗೆಯೇ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ಹಲವೆಡೆ ಗಲಭೆಗಳು ಆಗುತ್ತಿವೆ. ಪೌರತ್ವ ಕಾಯ್ದೆಯ ಬಗ್ಗೆ ಎಲ್ಲಾ ನಾಗರಿಕರು ಓದಿಕೊಳ್ಳಬೇಕು. ಮಕ್ಕಳು ಕೂಡ ಪೌರತ್ವ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. ಇದು ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, 1977ರಂದು ಜಾರಿಗೆ ತಂದ ಕಾಯ್ದೆಯನ್ನ ಇವತ್ತು ತಿದ್ದುಪಡಿ ಮಾಡಲಾಗಿದೆ. ಹಿಂದೆ ಆದ ಅನ್ಯಾಯ ಸರಿಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಮಕ್ಕಳಿಗೆ ತಿಳಿ ಹೇಳಿದರು.
ಬೇರೆ ಬೇರೆ ದೇಶಗಳಿಂದ ಬಂದವರು ಇಲ್ಲಿ ನೆಲೆಸಬೇಕಾದರೆ ಕೆಲವು ದಾಖಲೆಗಳನ್ನ ನೀಡಬೇಕು. ಇವತ್ತು ಪಾಕ್, ಬಾಂಗ್ಲಾದೇಶ ಮತ್ತಿತರ ಕಡೆಯಿಂದ ಭಯೋತ್ಪಾದಕರು ಅಕ್ರಮವಾಗಿ ಬಂದು ನೆಲೆಸುತ್ತಿದ್ದಾರೆ. ಏನಾದರೂ ಅನಾಹುತಗಳಾದರೆ ಯಾರು ಹೊಣೆ? ಇದೆಲ್ಲವನ್ನೂ ಗಮನದಲ್ಲಿ ಇಟ್ಕೊಂಡು ಈ ಕಾಯ್ದೆ ಜಾರಿಗೆ ತರಲಾಗಿದೆ. ಹೀಗಾಗಿ ಎಲ್ಲರೂ ಈ ಕಾಯ್ದೆಯ ಒಳಿತನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರು ತಿಳಿಸಿದರು.