– ಹ್ಯಾಟ್ರಿಕ್ ಕನಸಿಗೆ ಮುಳ್ಳಾಯಿತು ಪಕ್ಷಾಂತರ!
ಮೈಸೂರು: ಲೋಕಸಭೆಗೆ 10ನೇ ಸಾರ್ವತ್ರಿಕ ಚುನಾವಣೆಯು 1991 ರಲ್ಲಿ ನಡೆಯಿತು. ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಮೊದಲ ಬಾರಿಗೆ ಸೋತರು.

1991ರ ವೇಳೆಗೆ ಅಯೋಧ್ಯೆ ರಾಮಮಂದಿರ (Ayodhya Ram Mandir) ವಿವಾದ ಜೋರಾಗಿತ್ತು. ಆಗ ಕೆಲವು ಹಿತೈಷಿಗಳು ಒಡೆಯರ್ ಅವರನ್ನು ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನೀವು ಮಂತ್ರಿಯಾಗಬಹುದು, ಬಿಜೆಪಿ ಸೇರಿ ಎಂದು ಪುಸಲಾಯಿಸಿದರು. ಇದನ್ನು ನಂಬಿದ ಒಡೆಯರ್ ಬಿಜೆಪಿ ಸೇರಿ ಅಭ್ಯರ್ಥಿಯಾದರು.
ಇದರಿಂದ ಕಾಂಗ್ರೆಸ್‌ನಲ್ಲಿ (Congress) ಅಭ್ಯರ್ಥಿಯ ಕೊರತೆ ಕಾಡಿತು. ಕೊನೆಗೆ ಒಡೆಯರ್ ವಿರುದ್ದ ಹುಣಸೂರಿನ ಅಂದಿನ ಶಾಸಕಿಯಾಗಿದ್ದ ಮಾಜಿ ಸಚಿವೆ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು (D. Devaraj Urs) ಪುತ್ರಿ ಚಂದ್ರಪ್ರಭ ಅರಸು (Chandra Prabha Urs) ಅವರನ್ನು ಕಾಡಿಬೇಡಿ ಒಪ್ಪಿಸಲಾಯಿತು. ಅವರು ಒಲ್ಲದ ಮನಸ್ಸಿನಿಂದ ಕಣಕ್ಕಿಳಿದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
ಒಡೆಯರ್ ಪರ ಅಂದಿನ ಬಿಜೆಪಿಯ ಘಟಾನುಘಟಿ ನಾಯಕ ಎಲ್.ಕೆ.ಆಡ್ವಾಣಿ ಅವರು ಪುರಭವನ ಮೈದಾನದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಈಗಾಗಲೇ ಒಡೆಯರ್ ಗೆದ್ದಾಗಿದೆ ಎಂದು ಹೇಳಿದ್ದರು. ಆದರೆ ಫಲಿತಾಂಶ ಬಂದಾಗ ಚಂದ್ರಪ್ರಭ ಗೆದ್ದು, ಒಡೆಯರ್ ಸೋತರು. ಚಂದ್ರಪ್ರಭ ಅವರಿಗೆ 2,25,887 ಮತಗಳು ಬಂದರೆ ಒಡೆಯರ್‌ಗೆ 2,08,999 ಮತಗಳು ದೊರೆತಿದ್ದವು. ಸತತ ಎರಡನೇ ಬಾರಿಗೆ ಜನತಾಪಕ್ಷದಿಂದ ಕಣಕ್ಕಿಳಿದಿದ್ದ ಡಿ. ಮಾದೇಗೌಡರಿಗೆ 1,17,471 ಮತಗಳು ಬಂದಿದ್ದವು.


