ನವದೆಹಲಿ: ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಸ್ಮಶಾನ ಇಲ್ಲವೆಂದು ಜಿಲ್ಲಾಡಳಿತ ಹೇಳಿದೆ. ಹೀಗಾಗಿ ಅಲ್ಲೇ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಉಡುಪಿಯ ಶ್ರೀಕೃಷ್ಣ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಶ್ರೀರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಗೆ ಮುನ್ನ ಮಾತನಾಡಿದ ಅವರು, ದಕ್ಷಿಣ ಭಾರತದ ಏಕೈಕ ಸದಸ್ಯನಾಗಿ ಭಾಗಿಯಾಗುತ್ತಿದ್ದೇನೆ. ಸಭೆಯಲ್ಲಿ ರಾಮ ಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು ಭಾಗಿಯಾಗಲಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ವಿಸ್ತೃತ ಚರ್ಚೆ ನಡೆಯಲಿದೆ. ಇದೊಂದು ಪೂರ್ವಭಾವಿ ಸಭೆಯಾಗಿದ್ದು, ಮುಂದೆ ಏನು? ಹೇಗೆ ಮಾಡಬೇಕು? ಮಂದಿರ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಬಗ್ಗೆ ಚಿಂತಿಸಲಾಗುವುದು ಎಂದರು.
ರಾಮ ಮಂದಿರ ನಿರ್ಮಾಣ ವಿಚಾರದ ಪ್ರತಿ ಹಂತದಲ್ಲಿ ಆಕ್ಷೇಪ ಕೇಳಿ ಬರುತ್ತಿದೆ. ಅದೇ ರೀತಿ ಈಗ ಮಂದಿರ ನಿರ್ಮಾಣ ಸ್ಥಳದಲ್ಲಿ ಸ್ಮಶಾನ ಇತ್ತು ಎಂದು ಸುದ್ದಿ ಹಬ್ಬಿದೆ. ಆದರೆ ಜಿಲ್ಲಾಡಳಿತ ಈ ಸುದ್ದಿಯನ್ನು ತಿರಸ್ಕರಿಸಿದ್ದು ದಾಖಲೆಯ ಪ್ರಕಾರ ಯಾವುದೇ ಸ್ಮಶಾನ ಅಲ್ಲಿಲ್ಲ ಎಂದು ಖಚಿತಪಡಿಸಿದೆ. ಇದನ್ನು ಹೊರತಾಗಿಯೂ ಮಂದಿರ ನಿರ್ಮಾಣಕ್ಕೂ ಮುನ್ನ ಭೂಮಿಯಲ್ಲಿ ನೀರು ಸಿಗುವರೆಗೂ ಉತ್ಖನನ ನಡೆಸಲಾಗುತ್ತದೆ. ಬಳಿಕವಷ್ಟೆ ಮಂದಿರ ನಿರ್ಮಾಣ ಚಾಲನೆ ನೀಡಲಿದ್ದೇವೆ. ಇಂದಿನ ಸಭೆಯಲ್ಲಿ ಮಂದಿರ ನಿರ್ಮಾಣಕ್ಕೆ ದಿನಾಂಕವೂ ನಿಗದಿಯಾಗಬಹುದು ಎಂದು ಹೇಳಿದರು.
ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 67 ಎಕರೆ ಭೂಮಿ ನೀಡಿದೆ. ಆದರೆ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕಿದ್ದು, ಈ ಪ್ರಮಾಣದ ಭೂಮಿ ಸಾಲದಾಗಬಹುದು. ಈಗಾಗಲೇ ಮಂದಿರದ ನೀಲಿ ನಕ್ಷೆ ಇದ್ದು ಅದನ್ನು ಮುಂದುವರಿಸಬೇಕೆ ಬದಲಿಸಬೇಕೆ ಎನ್ನುವುದು ಸಭೆಯಲ್ಲಿ ಚರ್ಚೆ ಆಗಲಿದೆ ಎಂದರು.