ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಾಲ್ಯದ ಹೆಸರು ಶಿವಣ್ಣ. 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಶಿವಣ್ಣ 1926ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳ ಜೊತೆ ಶಿವಣ್ಣ ಅವರ ಒಡನಾಟ ಹೆಚ್ಚಾಯಿತು. ಈ ವರ್ಷವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಕಾಲೇಜು ಸೇರಿದರೂ ಶ್ರೀಗಳ ಜೊತೆಗಿನ ಸಂಬಂಧ ಹಾಗೆಯೇ ಮುಂದುವರಿದಿತ್ತು.
1941ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಈ ವೇಳೆ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ ಅವರ ಮೇಲೆ ಶ್ರೀಗಳ ಗಮನ ಹೋಗುತ್ತದೆ. ಶಿವಣ್ಣನ ಹಿನ್ನೆಲೆಯನ್ನು ಚೆನ್ನಾಗಿ ಅರಿತ ಕಾರಣ ಉದ್ದಾನ ಶ್ರೀಗಳು ಯಾರ ಜೊತೆಯೂ ನಿರ್ಧಾರ ತೆಗೆದುಕೊಳ್ಳದೇ ಎಲ್ಲರ ಮುಂದೆ ನನ್ನ ಮುಂದಿನ ಉತ್ತರಾಧಿಕಾರಿ ಶಿವಣ್ಣ ಎಂದು ಘೋಷಿಸಿ ಬಿಡುತ್ತಾರೆ.
Advertisement
Advertisement
ಎಲ್ಲರಂತೆ ಸಾಮಾನ್ಯರಾಗಿ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣನವರು ಮರಳಿ ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿ ‘ಶ್ರೀ ಶಿವಕುಮಾರ ಸ್ವಾಮೀಜಿ’ಯಾಗಿ ಮರಳುತ್ತಾರೆ.
Advertisement
ಶ್ರೀಗಳ ಪೂರ್ವಾಶ್ರಮ ಹೀಗಿತ್ತು:
ಕರ್ನಾಟಕ ರತ್ನ, ನಡೆದಾಡುವ ದೇವರು ಎಂದೇ ಬಿರುದಾಂಕಿತ ಶ್ರೀ ಶಿವಕುಮಾರ ಸ್ವಾಮೀಜಿಯವರು ಮಾಗಡಿ ತಾಲೂಕಿನ ವೀರಾಪುರದಲ್ಲಿ ಏಪ್ರಿಲ್ 1, 1908ರಂದು ಹೊನ್ನಪ್ಪ, ಗಂಗಮ್ಮ ದಂಪತಿಯ ಮಗನಾಗಿ ಜನಿಸಿದರು. ಗಂಗಮ್ಮನವವರ ಪುಣ್ಯ ಗರ್ಭದಲ್ಲಿ 13ನೇ ಮಗನಾಗಿ ಜನಿಸಿದ ಮಗುವಿಗೆ `ಶಿವಣ್ಣ’ ಎಂದು ನಾಮಕರಣ ಮಾಡಿದರು. 1913ರಲ್ಲಿ ಪ್ರಾಥಮಿಕ ಮತ್ತು 1921ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಾಗವಲ್ಲಿಯಲ್ಲಿ ಮುಗಿಸಿ 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದರು.
Advertisement
ಸಿದ್ದಗಂಗಾ ಮಠದ ಒಡನಾಟ ಹಿಂದೆಯೇ ಇದ್ದರೂ ಹೈಸ್ಕೂಲ್ ಶಿಕ್ಷಣದ ವೇಳೆ ಮತ್ತಷ್ಟು ಹೆಚ್ಚಾಯಿತು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಸ್ವಾಮಿಗಳ ಜೊತೆ ಇವರ ಸಂಪರ್ಕ ಬೆಳೆಯಿತು.
1927ರಲ್ಲಿ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ರಾವ್ ಬಹದ್ದೂರ್ ಶ್ರೀ ಗುಬ್ಬಿ ತೋಂಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡ ಶಿವಣ್ಣ, ಶಿಸ್ತುಬದ್ಧವಾದ ವಿದ್ಯಾರ್ಥಿ ಜೀವನ ನಡೆಸಿದರು. ಮಠದ ಹಿತವನ್ನೇ ಬಯಸುತ್ತಿದ್ದ ಶಿವಣ್ಣ, ಉದ್ದಾನ ಶ್ರೀಗಳು ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಹೀಗಾಗಿ ಉದ್ದಾನ ಶ್ರೀಗಳಿಗೆ ಮತ್ತು ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರಿಗೆ ಶಿವಣ್ಣ ಪ್ರೀತಿ ಪಾತ್ರರಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv