ಚಿಕ್ಕೋಡಿ: ಶ್ರೀರಾಮ ಸೇನೆ ವತಿಯಿಂದ(Sri Ram Sena) ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ತ್ರಿಶೂಲ ಧಿಕ್ಷೆ(Trishul Diksha) ಕಾರ್ಯಕ್ರಮ ಬೆಳಗಾವಿ (Belagavi) ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಜರುಗಿತು.
ಶ್ರೀರಾಮಸೇನೆ ವತಿಯಿಂದ ಹುಕ್ಕೇರಿ ಪಟ್ಟಣದ ಅಡವಿಸಿದ್ಧೇಶ್ವರ ಮಠದಲ್ಲಿ ನೂರಾರು ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಬೆಳಗಾವಿ ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಕಠಿಣ ನಿರ್ಬಂಧ ಹೇರಿ, ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರು.
ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಸದ್ಯಕ್ಕೆ ಸಾರ್ವಜನಿಕವಾಗಿ ತ್ರಿಶೂಲ ವಿತರಣೆ ಮಾಡುವುದಿಲ್ಲ ಎಂಬ ಭರವಸೆಯ ಬಳಿಕ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿ ಹುಕ್ಕೇರಿಯ ಲಕ್ಷ್ಮೀ ದೇವಸ್ಥಾನದಲ್ಲಿ ಸಭೆ ನಡೆಸಲು ಅವಕಾಶ ನೀಡಲಾಯಿತು.
ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Muthalik) ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ತೀವ್ರವಾಗಿ ಕಿಡಿಕಾರಿದರು.

ಈ ಹಿಂದೆ ಎರಡು ಬಾರಿ ನಾವು ಯಶಸ್ವಿಯಾಗಿ ತ್ರಿಶೂಲ ದೀಕ್ಷೆ ನೀಡಿದ್ದೇವೆ. ಆದರೆ ಈ ಬಾರಿ ಹುಕ್ಕೇರಿಯಲ್ಲಿ ಸರ್ಕಾರ ನಮಗೆ ನಿರ್ಬಂಧ ಹೇರಿದೆ. ಸದ್ಯಕ್ಕೆ ತ್ರಿಶೂಲ ನೀಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಕ್ಷಮೆ ಇರಲಿ. ಆದರೆ ನಾವು ಇಲ್ಲಿಗೆ ಬಿಡುವುದಿಲ್ಲ. ಈ ನಿರ್ಬಂಧದ ವಿರುದ್ಧ ನ್ಯಾಯಾಲಯದ (Court) ಮೂಲಕ ಕಾನೂನು ಹೋರಾಟ ನಡೆಸಿ ಆರ್ಡರ್ ತರುತ್ತೇವೆ. ಆ ಬಳಿಕ ಕೋರ್ಟ್ ಆದೇಶದೊಂದಿಗೆ ಪ್ರತಿಯೊಬ್ಬ ಹಿಂದೂ ಮಹಿಳೆಯ ಮನೆ ಮನೆಗೆ ಹೋಗಿ ತ್ರಿಶೂಲ ತಲುಪಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಸವಾಲು ಹಾಕಿದರು. ಇದನ್ನೂ ಓದಿ: ನನ್ನ ರಾಜಕೀಯ ಮುಗಿಯಿತು.. ನೀವು ಮೈ ಮರೆತರೆ ನಿಮ್ಮ ರಾಜಕೀಯದ ಮಾರಣಹೋಮ ನಿಶ್ಚಿತ: ಸಿದ್ದರಾಮಯ್ಯ
ರಾಜಕಾರಣಿಗಳು ಮತ್ತು ಪೊಲೀಸರ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ನಾವು ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾದರೆ ಏಕೆ ತಡೆಯುತ್ತೀರಿ? ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆ ಏನಾಯಿತು ಎಂದು ಎಲ್ಲರಿಗೂ ಗೊತ್ತು. ಮದುವೆಯಾಗುವುದಿಲ್ಲ ಎಂದಿದ್ದಕ್ಕೆ ಮುಸ್ಲಿಂ ಗೂಂಡಾವೊಬ್ಬ ಹಾಡುಹಗಲೇ ಕೊಲೆ ಮಾಡಿದ. ಇಂತಹ ಜಿಹಾದಿ ಮಾನಸಿಕತೆಯನ್ನು ತಡೆಯಲು ಶ್ರೀರಾಮಸೇನೆ ಪಣ ತೊಟ್ಟಿದೆ. ಅಂದು ಮೂರೇ ತಿಂಗಳಲ್ಲಿ ಶಿಕ್ಷೆ ಕೊಡಿಸುತ್ತೇವೆ ಎಂದಿದ್ದ ಸರ್ಕಾರ, ಎರಡು ವರ್ಷ ಕಳೆದರೂ ಏನೂ ಮಾಡಿಲ್ಲ. ಆರೋಪಿ ಜೈಲಿನಲ್ಲಿ ಆನಂದವಾಗಿದ್ದಾನೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಕಾರ್ಯಕ್ರಮದಲ್ಲಿ ಮಹಿಳಾ ವಾಗ್ಮಿ ವಿಜಯಲಕ್ಷ್ಮೀ ಬಾಳೆಕುಂದ್ರಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಭಾಗಿಯಾಗಿದ್ದರು.
