ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ

Public TV
4 Min Read
Team India 3

ಮುಂಬೈ: ಅಕ್ಷರ್‌ ಪಟೇಲ್‌ (Axar Patel), ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ಸ್ಫೋಟಕ ಅರ್ಧಶತಕದಿಂದ ಗೆಲುವಿನ ಹತ್ತಿರ ಬಂದಿದ್ದ ಭಾರತ (Team India) ಕೊನೆಯಲ್ಲಿ ವಿಕೆಟ್‌ ಕಳೆದುಕೊಂಡು ಸೋತಿದೆ. ಎರಡನೇ ಟಿ20 ಪಂದ್ಯವನ್ನು 16 ರನ್‌ಗಳಿಂದ ಲಂಕಾ (Srilanka) ಗೆದ್ದುಕೊಂಡಿದ್ದು, ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮವಾಗಿದೆ.

9.1 ಓವರ್‌ಗಳಲ್ಲಿ 57 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದರಿಂದ 207 ರನ್‌ಗಳ ಗುರಿ ಭಾರತಕ್ಕೆ ಕಠಿಣವಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಕೇವಲ 41 ಎಸೆತಗಳಿಗೆ 91 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದಿಟ್ಟರು. ಬಳಿಕ ಅಕ್ಷರ್‌ ಪಟೇಲ್‌ ಮತ್ತು ಶಿವಂ ಮಾವಿ 22 ಎಸೆತಗಳಲ್ಲಿ 41 ರನ್‌ ಚಚ್ಚಿದ್ದರು. ಆದರೆ ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌, ಅಕ್ಷರ್‌ ಪಟೇಲ್‌ ಔಟ್‌ ಆದ ಕಾರಣ ಭಾರತ 8 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಸೋಲು ಅನುಭವಿಸಿತು.

Axar Patel

ಸಿಕ್ಸರ್‌ ಬೌಂಡರಿಗಳ ಈ ಆಟದಲ್ಲಿ ಒಟ್ಟು 26 ಸಿಕ್ಸರ್‌ ಹಾಗೂ 21 ಬೌಂಡರಿಗಳು ದಾಖಲಾದವು. ಶ್ರೀಲಂಕಾ ಪರ 14 ಸಿಕ್ಸರ್‌, 10 ಬೌಂಡರಿಗಳು ದಾಖಲಾದರೆ, ಟೀಂ ಇಂಡಿಯಾ ಪರ 12 ಸಿಕ್ಸರ್‌, 11 ಬೌಂಡರಿಗಳು ದಾಖಲಾದವು. 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದ್ದ ಟೀಂ ಇಂಡಿಯಾ ಉಳಿದ 10 ಓವರ್‌ಗಳಲ್ಲಿ 126 ರನ್‌ಗಳನ್ನು ಪೇರಿಸಿ ಕೊನೆಯವರೆಗೂ ಹೋರಾಡಿತು.

ಕೊನೆಯ ಓವರ್‌ನಲ್ಲಿ ಟೀಂ ಇಂಡಿಯಾಕ್ಕೆ 21 ರನ್‌ಗಳ ಅಗತ್ಯವಿತ್ತು. ಈ ವೇಳೆ 20ನೇ ಓವರ್‌ನ ಮೊದಲ ಎಸೆತವನ್ನು ಮಾವಿ ಸಿಂಗಲ್‌ ತಂದುಕೊಟ್ಟರು. ಬಳಿಕ ಸ್ಟ್ರೈಕ್‌ ತೆಗೆದುಕೊಂಡ ಅಕ್ಷರ್‌ ಪಟೇಲ್‌ 2ನೇ ಎಸೆತದಲ್ಲಿ 2 ರನ್‌ ಕದಿಯುವಲ್ಲಿ ಯಶಸ್ವಿಯಾದರು. 3ನೇ ಎಸೆತದಲ್ಲಿ ಸಿಕ್ಸ್‌ ಎತ್ತುವ ಬರದಲ್ಲಿ ಬೌಂಡರಿ ಲೈನ್‌ ಬಳಿ ಕ್ಯಾಚ್‌ ನೀಡಿ ಔಟಾದರು. 4, 5ನೇ ಎಸೆತದಲ್ಲಿ ತಲಾ ಒಂದೊಂದು ರನ್‌ ಸೇರ್ಪಡೆಯಾಯಿತು. ಕೊನೆಯ ಎಸೆತದಲ್ಲಿ ಮಾವಿ ಕ್ಯಾಚ್‌ ನೀಡಿದರು.

IndvsSl 1

ಶ್ರೀಲಂಕಾ ತಂಡದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಗಿತ್ತು. ಕ್ರೀಸ್‌ನಲ್ಲಿ ಅಬ್ಬರಿಸಬೇಕಿದ್ದ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟು ಪೆವಿಲಿಯನ್‌ ಸೇರಿದ್ರು.

ಆರಂಭಿಕರಾಗಿ ಕಣಕ್ಕಿಳಿದ ಇಶಾನ್‌ ಕಿಶನ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಇಶಾನ್‌ ಕೇವಲ 2 ರನ್‌ ಗಳಿಸಿದ್ರೆ ಗಿಲ್‌ 5 ರನ್‌ ಗಳಿಸಿ ಔಟಾದರು. ನಂತರ ಬಂದ ರಾಹುಲ್‌ ತ್ರಿಪಾಟಿ ಸಹ 5 ರನ್‌ ಗಳಿಗೆ ಮಕಾಡೆ ಮಲಗಿದ್ರು. ಭರವಸೆಯ ಆಟಗಾರ, ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಸಹ 12 ಎಸೆತಗಳಲ್ಲಿ 1 ಸಿಕ್ಸರ್‌, 1 ಬೌಂಡರಿಯೊಂದಿಗೆ 12 ರನ್‌ ಗಳಿಸಿ ಔಟಾದರು. ಒಟ್ಟಿನಲ್ಲಿ ಪವರ್‌ ಪ್ಲೇ ಮುಗಿಯುವಷ್ಟಲ್ಲಿ ಟೀಂ ಇಂಡಿಯಾ 41 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಆಲ್‌ರೌಂಡರ್‌ ದೀಪಕ್‌ ಹೂಡಾ ಸಹ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದ್ರು.

Kusal Mendis 1

ಅಕ್ಷರ್‌-ಸೂರ್ಯ ಹೊಡಿಬಡಿ ಆಟ:
ಬಸವಳಿದಿದ್ದ ಟೀಂ ಇಂಡಿಯಾಕ್ಕೆ (Team India) ಮಧ್ಯಮ ಕ್ರಮಾಂಕದಲ್ಲಿ ಬಂದ ಅಕ್ಷರ್‌ ಪಟೇಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಆಸರೆಯಾದರು. ಸಿಕ್ಸರ್‌, ಬೌಂಡರಿಗಳ ಮೂಲಕ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿ ರನ್‌ ಕಲೆ ಹಾಕಿದರು. ಸೂರ್ಯಕುಮಾರ್‌ ಯಾದವ್‌ 36 ಎಸೆತಗಳಲ್ಲಿ 3 ಸಿಕ್ಸರ್‌, 3 ಬೌಂಡರಿಯೊಂದಿಗೆ ಆಕರ್ಷಕ ಅರ್ಧ ಶತಕ ಗಳಿಸಿದ್ರೆ, ಕೊನೆಯವರೆಗೂ ಅಬ್ಬರಿಸಿದ ಅಕ್ಷರ್‌ ಪಟೇಲ್‌ 31 ಎಸೆತಗಳಲ್ಲಿ 6 ಸಿಕ್ಸರ್‌, 3 ಬೌಂಡರಿಳೊಂದಿಗೆ 65 ರನ್‌ ಚಚ್ಚಿ ಔಟಾದರು. ಈ ವೇಳೆ ಶಿವಂ ಮಾವಿ 15 ಎಸೆತಗಳಲ್ಲಿ ಸ್ಫೋಟಕ 26 ರನ್‌ ಗಳಿಸಿ ಔಟಾದರು.

Axar Patel 1

ಕೆಟ್ಟ ದಾಖಲೆ ಬರೆದ ಅರ್ಷ್‌ ದೀಪ್‌ಸಿಂಗ್‌:
ಗಾಯದ ಸಮಸ್ಯೆಯಿಂದಾಗಿ ಮೊದಲ ಟಿ20 ಯಲ್ಲಿ ಹೊರಗುಳಿದಿದ್ದ ಅರ್ಷ್‌ದೀಪ್‌ ಸಿಂಗ್‌ ಈ ಪಂದ್ಯದಲ್ಲಿ ಭಾರೀ ನಿರಾಸೆ ಅನುಭವಿಸಿದ್ದಾರೆ. ಕೇವಲ 2 ಓವರ್‌ಗಳ ಬೌಲಿಂಗ್ ಮಾಡಿದ ಅರ್ಷ್‌ದೀಪ್‌ ಬರೊಬ್ಬರಿ 37 ರನ್‌ ಚಚ್ಚಿಸಿಕೊಂಡರು. 18.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲದೇ ಒಂದೇ ಮ್ಯಾಚ್‌ನಲ್ಲಿ ಹ್ಯಾಟ್ರಿಕ್‌ ನೋಬಾಲ್‌ ನೀಡಿ ಅಂತ್ಯಂತ ಕೆಟ್ಟದಾಖಲೆ ಬರೆದರು.

IndvsSL 2

ಲಂಕಾ ಸಿಕ್ಸರ್‌, ಬೌಂಡರಿ ಆಟ:
ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳು ಟೀಂ ಇಂಡಿಯಾ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸಿದ್ರು. ಮಧ್ಯಮ ಓವರ್‌ಗಳಲ್ಲಿ ಲಂಕಾ ಪಡೆಯನ್ನು ಕಟ್ಟಿಹಾಕಿತ್ತಾದರೂ ಡೆತ್‌ ಓವರ್‌ನಲ್ಲಿ ಅಬ್ಬರಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ಬೆವರಿಳಿಸಿದರು.

ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಲಂಕಾ ಉತ್ತಮ ಶುಭಾರಂಭ ಪಡೆಯಿತು. ಅದರಲ್ಲೂ ಕುಸಾಲ್ ಮೆಂಡಿಸ್ (Kusal Mendis) ಟೀಂ ಇಂಡಿಯಶ ಬೌಲರ್‌ಗಳ ಬೆವರಿಳಿಸುತ್ತಾ ಸಾಗಿದರು. ಪಾತುಮ್ ನಿಸ್ಸಂಕ ಹಾಗೂ ಮೆಂಡಿಸ್‌ ಜೋಡಿ 8.2 ಓವರ್‌ಗಳಲ್ಲಿ 80 ರನ್ ಕಲೆ ಹಾಕಿ ಬೇರ್ಪಟ್ಟಿತು. ಮೆಂಡಿಸ್ 31 ಎಸೆತಗಳಲ್ಲಿ 52 ರನ್‌ (4 ಸಿಕ್ಸರ್‌, 3 ಬೌಂಡರಿ) ಗಳಿಸಿ ಮಿಂಚಿದರು. ಪಾತುಮ್ ನಿಸ್ಸಂಕ 35 ಎಸೆತಗಳಲ್ಲಿ 33 ರನ್‌ ಕಲೆಹಾಕಿ ಔಟಾದರು.

Dasun Shanaka

ನಂತರ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಚರಿತ್ ಅಸಲಂಕಾ ಹಾಗೂ ನಾಯಕ ದಾಸುನ್ ಶನಕ (Dasun Shanaka) ಸಿಕ್ಸರ್‌ ಬೌಂಡರಿಗಳ ಭರ್ಜರಿ ಜೊತೆಯಾಟವಾಡಿದರು.

ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಅಬ್ಬರಿಸಿದ ನಾಯಕ ಶನಕ ಕೇವಲ 22 ಎಸೆತಗಳಲ್ಲಿ ಭರ್ಜರಿ 56 ರನ್‌ (6 ಸಿಕ್ಸರ್‌, 2 ಬೌಂಡರಿ) ಚಚ್ಚಿದರೆ, ಅಸಲಂಕಾ 19 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ 37 ಬಾರಿಸಿದರು. ಈ ಮೂಲಕ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 206 ರನ್ ಕಲೆಹಾಕಿತು. ಬಾನುಕಾ ರಾಜಪಕ್ಷ 2 ರನ್‌, ಧನಂಜಯ ಡಿ.ಸೆಲ್ವ 3 ರನ್‌ ಗಳಿಸಿದ್ರೆ ವಾನಿಂದು ಹಸರಂಗ ಶೂನ್ಯಕ್ಕೆ ನಿರ್ಗಮಿಸಿದ್ರು.

IndvsSl 1

4 ಓವರ್‌ಗಳಲ್ಲಿ 48 ರನ್‌ ನೀಡಿದ ಉಮ್ರಾನ್ ಮಲಿಕ್ 3 ವಿಕೆಟ್‌ ಪಡೆದರೆ, 24 ರನ್‌ ನೀಡಿದ ಅಕ್ಷರ್‌ ಪಟೇಲ್‌ 2 ವಿಕೆಟ್‌ ಪಡೆದರು. ಯಜುವೇಂದ್ರ ಚಾಹಲ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *