– ಕೂಪರ್ ಕೊನೊಲಿ ಆಕರ್ಷಕ ಶತಕದಾಟ ವ್ಯರ್ಥ
ಹೈದರಾಬಾದ್: ಕಳಪೆ ಫೀಲ್ಡಿಂಗ್, ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದ ಪಂಜಾಬ್ ಕಿಂಗ್ಸ್ ಮತ್ತೊಂದು ಪಂದ್ಯವನ್ನು ಕೈಚೆಲ್ಲಿದೆ. ತವರಲ್ಲಿ ಉತ್ತಮ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ 33 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಹೆಚ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಪಿಬಿಕೆಎಸ್ 20 ಓವರ್‌ಗಳಿಗೆ 7 ವಿಕೆಟ್ ಕಳೆದುಕೊಂಡು 33 ರನ್‌ಗಳ ಸೋಲನುಭವಿಸಿತು.
ಬ್ಯಾಟಿಂಗ್‌ನಲ್ಲಿ ಹೈದರಾಬಾದ್ ಉತ್ತಮ ಆರಂಭವನ್ನೇ ಪಡೆಯಿತು. ಅಭಿಷೇಕ್ ಶರ್ಮಾ (35) ಮತ್ತು ಟ್ರಾವಿಸ್ ಹೆಡ್ (38) ಜೋಡಿ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೈತನ್ಯ ತುಂಬಿತು. 7ನೇ ಓವರ್ ಹೊತ್ತಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್‌ಗೆ ಇಶಾನ್ ಕಿಶನ್ ಮತ್ತು ಹೆನ್ರಿ ಕ್ಲಾಸೆನ್ ನೆರವಾದರು.
ಇಶಾನ್ ಮತ್ತು ಕ್ಲಾಸೆನ್ ಹೊಡಿಬಡಿ ಆಟದ ಮೂಲಕ ತಂಡವು ಸವಾಲಿನ ಮೊತ್ತ ಪೇರಿಸಲು ನೆರವಾದರು. ಪಂದ್ಯದಲ್ಲಿ ಪಂಜಾಬ್ ಕಳಪೆ ಫೀಲ್ಡಿಂಗ್ ಪ್ರದರ್ಶನ ಕಂಡುಬಂತು. ಪ್ರಮುಖ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿ ಸಂಕಷ್ಟಕ್ಕೀಡಾದರು. ಈ ಅವಕಾಶವನ್ನು ಬಳಸಿಕೊಂಡ ಕಿಶನ್ ಅರ್ಧಶತಕ ಗಳಿಸಿದರು. ಕ್ಲಾಸೆನ್ 69 ರನ್ ಚಚ್ಚಿದರು. ನಿತೀಶ್ ಕುಮಾರ್ ಔಟಾಗದೇ 29 ರನ್ ಗಳಿಸಿದರು.
ಹೈದರಾಬಾದ್ ನೀಡಿದ 236 ರನ್ ಗುರಿ ಬೆನ್ನತ್ತಿದ ಪಂಜಾಬ್ ಆರಂಭದಲ್ಲೇ ಎಡವಿತು. ತಂಡದ ಮೊತ್ತ ಕೇವಲ 23 ರನ್ ಇರುವಾಗಲೇ ಪ್ರಿಯಾಂಶ್ ಆರ್ಯ, ಪ್ರಭಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಈ ವೇಳೆ ಕೂಪರ್ ಕೊನೋಲಿ 59 ಬಾಲ್‌ಗೆ ಶತಕ ಸಿಡಿಸಿ (107 ರನ್, 8 ಸಿಕ್ಸರ್, 7 ಫೋರ್) ವ್ಯರ್ಥ ಏಕಾಂಗಿ ಹೋರಾಟ ನಡೆಸಿದರು. ಮಾರ್ಕಸ್ ಸ್ಟೊಯಿನಿಸ್ 28, ಸೂರ್ಯಾಂಶ್ ಶೆಡ್ಜ್ 25 ರನ್, ಮಾರ್ಕೊ ಜಾನ್ಸೆನ್ 19 ರನ್ ಗಳಿಸಿದರು.

