– ಮೂವರನ್ನು ವಿಚಾರಿಸಿ ಕಳಿಸಿದ ಪೊಲೀಸರು
ಬೆಂಗಳೂರು: ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸರು ಕೋರ್ಟ್ ಅನುಮತಿ ಪಡೆದು ಐಪಿಸಿ ಸೆಕ್ಷನ್ 120ಬಿ, 506 ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಕೊಲೆಗೆ ಸ್ಕೆಚ್ ಸಂಬಂಧ ಕುಳ್ಳ ದೇವರಾಜ್, ಧರ್ಮ, ಮಂಜು ಎಂಬ ಮೂವರನ್ನು ವಶಕ್ಕೆ ಪಡೆದು ಪೊಲೀಸರು ಬಿಟ್ಟುಕಳಿಸಿದ್ದಾರೆ. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್
ಕುಳ್ಳ ದೇವರಾಜ್ ಕಡೆ ನಿಂತ್ರಾ ಪೊಲೀಸರು..?: ಹತ್ಯೆಗೆ ಸಂಚು ಕೇಸಲ್ಲಿ ಪೊಲೀಸರು ಕುಳ್ಳ ದೇವರಾಜ್ ಕಡೆ ನಿಂತ್ರಾ ಎಂಬ ಅನುಮಾನವೊಂದು ಎದ್ದು ಕಾಣುತ್ತಿದೆ. ಶಾಸಕರ ದೂರಿನಲ್ಲಿ ಗೋಪಾಲಕೃಷ್ಣ ಒಬ್ಬರೇ ಆರೋಪಿ. ಎಫ್‍ಐಆರ್ ಪ್ರತಿಯಲ್ಲಿ ಕೂಡ ಗೋಪಾಲಕೃಷ್ಣ ಒಬ್ಬರನ್ನೇ ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ. ದೂರಿನಲ್ಲಿ ಕುಳ್ಳ ದೇವರಾಜ್ ಹೆಸರು ಸೂಚಿಸಿದ್ದರೂ ಎಫ್‍ಐಆರ್‍ನಲ್ಲಿ ಹೆಸರಿಲ್ಲ. ಹೀಗಾಗಿ ಶಾಸಕ ಎಸ್.ಆರ್.ವಿಶ್ವನಾಥ್ ಒತ್ತಡಕ್ಕೆ ಪೊಲೀಸರು ಮಣಿದ್ರಾ ಎಂಬ ಸಂಶಯ ಹುಟ್ಟಿಕೊಂಡಿದೆ. ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ – ಸುಪಾರಿ ಕೊಡ್ತಿರೋ ವೀಡಿಯೋ, ಆಡಿಯೋ ವೈರಲ್
ನೋಟಿಸ್ ಜಾರಿ: ಇತ್ತ ಪ್ರಕರಣ ಸಂಬಂಧ ರಾಜಾನುಕುಂಟೆ ಪೊಲೀಸರು ಶಾಸಕ ಎಸ್.ಆರ್.ವಿಶ್ವನಾಥ್‍ಗೆ ನೋಟಿಸ್ ನೀಡಿದ್ದಾರೆ. ದೂರಿನ ಜೊತೆ ಯಾವುದೇ ದಾಖಲೆಗಳನ್ನ ನೀಡದ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಪಟ್ಟ ದಾಖಲೆ ನೀಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ಕುಳ್ಳ ದೇವರಾಜ್, ಕಾಂತ, ಧರ್ಮ, ಮಂಜ ಹಾಗೂ ಸಹಚರಿಗೆ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಮಂದಿಗೆ ರಾಜಾನುಕುಂಟೆ ಪೊಲೀಸರು ನೋಟಿಸ್ ನೀಡಿದ್ದಾರೆ.
ತನಿಖಾಧಿಕಾರಿ ದೊಡ್ಡಬಳ್ಳಾಪುರ ಇನ್ಸ್ ಪೆಕ್ಟರ್ ನವೀನ್ ಮುಂದೆ ತ್ವರಿತವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ಉಲ್ಲೇಖ ಮಾಡಲಾಗಿದೆ.