ಬೆಂಗಳೂರು: ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತೇವೆ. ಈ ಮೂಲಕ ಕೊಲೆ ಸಂಚಿನ ಹಿಂದೆ ಇರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆಯನ್ನು ಕೈಗೊಂಡಿದ್ದು, ಎಲ್ಲರಿಗೂ ನೋಟಿಸ್ ನೀಡುತ್ತಾರೆ. ನನಗೆ ನೋಟಿಸ್ ಬಂದಾಗ ನಾನು ತನಿಖೆಗೆ ಸಹಕರಿಸುವೆ ಎಂದರು.
ಆಡಳಿತ ಪಕ್ಷದ ಶಾಸಕನ ವಿರುದ್ಧವೇ ಕೊಲೆ ಸಂಚು ನಡೆಸಿದ್ದರಿಂದ ಮುಖ್ಯಮಂತ್ರಿಗಳು ಕಠಿಣ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ. ವಿರೋಧ ಪಕ್ಷಗಳಿಂದಲೂ ಸಾಕಷ್ಟು ಬೆಂಬಲದ ಕರೆಗಳು ಬಂದಿವೆ. ಪಕ್ಷಭೇದ ಮರೆತು ತನಿಖೆ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನನ್ನ ಸೇವೆಯನ್ನು ಸಹಿಸಲಾಗದೆ ಕೊಲೆಗೆ ಸಂಚು: ಎಸ್.ಆರ್ ವಿಶ್ವನಾಥ್
ದೂರಿನಲ್ಲಿ ಗೋಪಾಲಕೃಷ್ಣ ಹೆಸರನ್ನೊಂದೇ ಉಲ್ಲೇಖಿಸಿದ ಕುರಿತು ಮಾತನಾಡಿದ ಅವರು, ಕುಳ್ಳ ದೇವರಾಜು ಆಗಲಿ, ಗೋಪಾಲಕೃಷ್ಣ ಆಗಲಿ ಯಾರನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೆ ಮಾಡುತ್ತೇನೆ. ಈ ಪ್ರಕರಣದಲ್ಲಿ ಇನ್ನು ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯುತ್ತದೆ. ತನಿಖೆಯಿಂದಾಗಿ ಸಂಪೂರ್ಣ ಮಾಹಿತಿಯೂ ಬಹಿರಂಗವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಇಂದು ಚರ್ಚೆ ನಡೆಸಲಿದ್ದೇನೆ ಎಂದರು.
ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಬುಧವಾರ ಎಫ್‍ಐಆರ್ ದಾಖಲಾಗಿದೆ. ಕೊಲೆಗೆ ಸ್ಕೆಚ್ ಸಂಬಂಧ ಕುಳ್ಳ ದೇವರಾಜ್, ಧರ್ಮ, ಮಂಜು ಎಂಬ ಮೂವರನ್ನು ವಶಕ್ಕೆ ಪಡೆದು ಪೊಲೀಸರು ಬಿಟ್ಟುಕಳಿಸಿದ್ದಾರೆ. ಇದನ್ನೂ ಓದಿ:ಎಸ್.ಆರ್. ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ- ಗೋಪಾಲಕೃಷ್ಣ ವಿರುದ್ಧ ಎಫ್‍ಐಆರ್