ಬೆಂಗಳೂರು: ಸಚಿವ ನಾಗೇಂದ್ರ (Nagendra) ಅವರೊಂದಿಗೆ ಮಾತನಾಡಿದ್ದೇನೆ ಎಂದು ರಾಜೀನಾಮೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದರು.
ವಾಲ್ಮೀಕಿ ನಿಗಮದ (Valmiki Development Corporation) ಹಗರಣ ಕುರಿತು ಮಾತನಾಡಿದ ಅವರು, ನಾಗೇಂದ್ರ ಅವರೊಂದಿಗೆ ಮಾತನಾಡಿದ್ದೇನೆ. ತನಿಖೆ ನಡೆಯುತ್ತಿದೆ, ನೋಡೋಣ ಎಂದರು. ರಾಜೀನಾಮೆಗೆ ಸೂಚನೆ ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮಾತಾನಾಡಿದ ತಕ್ಷಣ ರಾಜೀನಾಮೆ ಕೊಡಬೇಕು ಎಂದಲ್ಲ ಎಂಬ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ – ನಾಗೇಂದ್ರ ರಾಜೀನಾಮೆ ನೀಡ್ತಾರೆ ಎಂದ ಡಿಕೆಶಿ
ವಾಲ್ಮೀಕಿ ನಿಗಮದ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಸಚಿವ ನಾಗೇಂದ್ರ ಮೇಲೆ ಅಕ್ರಮ ಹಣ ವರ್ಗಾವಣೆ ಕಂಟಕ ಎದುರಾಗಿದೆ. ಬುಧವಾರ ಪ್ರಕರಣ ಸಂಬಂಧ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಸಭೆಗೆ ಸಚಿವ ನಾಗೇಂದ್ರರನ್ನೂ ಕರೆಸಿಕೊಂಡಿದ್ದರು. ಈ ವೇಳೆ ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ಪ್ರಕರಣ ಕುರಿತು ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. 50 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದರಿಂದ ಸಿಬಿಐ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ, ಬೆಳವಣಿಗೆ ಕುರಿತು ವಿಸ್ತೃತ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದಿದ್ದ ಚಲುವರಾಯಸ್ವಾಮಿ ವೀಡಿಯೋ ವೈರಲ್