LatestMain PostNational

ನಕಲಿ ನೋಟುಗಳ ಹಾವಳಿ ಹೆಚ್ಚಳ – ಕೇಂದ್ರದ ವಿರುದ್ಧ ಕಾಂಗ್ರೆಸ್, ಟಿಎಂಸಿ ತರಾಟೆ

ನವದೆಹಲಿ: ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ವರದಿಯಲ್ಲಿ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಭಾರೀ ಪ್ರಮಾಣದ ಏರಿಕೆಯನ್ನು ಬಹಿರಂಗಪಡಿಸಿದೆ. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯೀಕರಣ ಕ್ರಮದ ಬಗ್ಗೆ ಇತರ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

ಆರ್‌ಬಿಐ ವರದಿ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ಎಲ್ಲಾ ಮುಖಬೆಲೆಯ ನಕಲಿ ನೋಟುಗಳು ಹೆಚ್ಚಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 500 ರೂ. ಮುಖಬೆಲೆಯ ನಕಲಿ ನೋಟುಗಳು ಶೇ.101.9 ರಷ್ಟು ಹೆಚ್ಚಾಗಿದೆ. 2,000 ರೂ. ಮುಖಬೆಲೆಯ ನಕಲಿ ನೋಟುಗಳು ಶೇ.54.16 ರಷ್ಟು ಹೆಚ್ಚಾಗಿದೆ.

2016ರಲ್ಲಿ ಕೇಂದ್ರ ಸರ್ಕಾರ ಕಪ್ಪು ಹಣ ಹೊರಹಾಕುವುದು ಮಾತ್ರವಲ್ಲದೇ ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವ ಕಾರಣಕ್ಕೂ 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿತ್ತು.

ಇದೀಗ ಆರ್‌ಬಿಐ ವರದಿಯಲ್ಲಿ ದೇಶದಲ್ಲಿ ನಕಲಿ ನೋಟು ಹೆಚ್ಚುತ್ತಿರುವ ಮಾಹಿತಿಯನ್ನು ಹೊರಹಾಕಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಟಿಎಂಟಿಸಿ ಸಂಸದ ಓಬ್ರೇನ್ ಅವರು ಟ್ವಿಟ್ಟರ್‌ನಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಯುನಿಕಾರ್ನ್‌ಗಳ ಮೌಲ್ಯ 25 ಲಕ್ಷ ಕೋಟಿಗೆ ಹೆಚ್ಚಳ – ಮೋದಿ

ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ನೋಟು ರದ್ದತಿಯ ಏಕೈಕ ದುರದೃಷ್ಟಕರ ಯಶಸ್ಸು ಎಂದರೆ ಭಾರತದ ಆರ್ಥಿಕತೆಯ ನಾಶ ಎಂದಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ನಾಯಕ ಡೆರೆಕ್ ಒಬ್ರೇನ್, ನರೇಂದ್ರ ಮೋದಿಯವರೆ, ನೋಟು ಅಮಾನ್ಯೀಕರಣ ನೆನಪಿದೆಯಾ? ನೋಟು ರದ್ದತಿ ರಾಷ್ಟ್ರದ ಎಲ್ಲಾ ನಕಲಿ ನೋಟುಗಳನ್ನು ತೊಡೆದು ಹಾಕುತ್ತದೆ ಎಂದು ನೀವು ಯಾವ ಭರವಸೆಯಲ್ಲಿ ಹೇಳಿದ್ದೀರಿ? ಇದೀಗ ಆರ್‌ಬಿಐ ವರದಿ ಪ್ರಕಾರ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ನೋಟು ಅಮಾನ್ಯೀಕರಣ:
2016ರ ನವೆಂಬರ್‌ನಲ್ಲಿ ಸರ್ಕಾರ ಎಲ್ಲಾ 500 ಹಾಗೂ 1,000 ರೂ. ನೋಟುಗಳನ್ನು ಅಮಾನ್ಯೀಕರಿಸಿತು ಹಾಗೂ ಹೊಸ 500 ಮತ್ತು 2,000 ರೂ. ನೋಟುಗಳನ್ನು ಬಿಡುಗಡೆ ಮಾಡಿತು. ಈ ಕ್ರಮದಿಂದ ಭ್ರಷ್ಟಾಚಾರಕ್ಕೆ ಹಾಗೂ ನಕಲಿ ನೋಟು ಬಳಕೆಗೆ ಕಡಿವಾಣ ಬೀಳಲಿದ್ದು, ಡಿಜಿಟಲ್ ವಹಿವಾಟಿಗೆ ಉತ್ತೇಜನ ಸಿಗಲಿದೆ ಎಂದು ಕೇಂದ್ರ ತಿಳಿಸಿತ್ತು.

ಹಠಾತ್ತನೆ ನೋಟು ಅಮಾನ್ಯೀಕರಣದ ಘೋಷಣೆಯಿಂದಾಗಿ ಜನರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‌ಗಳ ಎದುರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಸರ್ಕಾರದ ಕ್ರಮದಿಂದ ನಗದು ಕೊರತೆ ಹಾಗೂ ಅನಾನುಕೂಲತೆಯೂ ಉಂಟಾಗಿತ್ತು. ಅಂದಿನಿಂದಲೂ ಈ ವಿಷಯ ದೇಶದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.

Leave a Reply

Your email address will not be published.

Back to top button