ಚಾಮರಾಜನಗರ: ಸಾಮಾನ್ಯವಾಗಿ ಮದುವೆ ಅಂದಮೇಲೆ ಬಂದ ಅಥಿತಿಗಳಿಗೆ ತಾಂಬೂಲದ ವೇಳೆ ಉಡುಗೊರೆಗಳನ್ನು ಕೊಡುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆ ಮನೆಯಲ್ಲಿ ಅತಿಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ ಪಾಠ ಮಾಡುವುದರ ಜೊತೆಗೆ, ಪರಿಸರ ಸಂರಕ್ಷಣೆಗೆಂದು ಒಂದು ಗಿಫ್ಟ್ ಕೂಡ ನೀಡಿದ್ದಾರೆ.
ಮರ ಬೆಳೆಸಿ ಪರಿಸರ ರಕ್ಷಿಸಿ ಎನ್ನುವ ಸಂದೇಶದೊಂದಿಗೆ ದಿವ್ಯಜ್ಯೋತಿ ಮತ್ತು ನಂದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಧುನಿಕರಣ ಜನರನ್ನು ಆವರಿಸುತ್ತಿರುವ ದಿನಗಳಲ್ಲಿ ಪರಿಸರವೂ ಕೂಡ ನಾಶವಾಗುತ್ತಿದೆ. ಈ ಪರಿಸರದ ಅವನತಿ ಆಗಬಾರದು ಎಂದು ನವ ಜೋಡಿಗಳು ಹಾಗೂ ಅವರ ಪೋಷಕರು ಜನರಿಗೆ ಪರಿಸರದ ಪಾಠ ಹೇಳಿ ಕೊಡುವುದರ ಜೊತೆಗೆ ಬಂದಿದ್ದ ಅತಿಥಿಗಳಿಗೆ ತಾಂಬೂಲದ ಜೊತೆಗೆ ಸಸಿಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ಕಾಡುಗಳು ಬೆಂಕಿ ಬಿದ್ದು ನಾಶವಾಗಿತ್ತು. ಈ ರೀತಿ ಕಾಡು ನಾಶವಾದರೆ ನಮ್ಮ ಪರಿಸರ ಸಂಪೂರ್ಣವಾಗಿ ಹಾಳಾಗುತ್ತದೆ. ಹೀಗಾಗಿ ಪರಿಸರಕ್ಕೆ ನಮ್ಮದೊಂದು ಕಾಣಿಕೆ ಇರಲಿ ಎಂದು ಬಂದ ಅಥಿತಿಗಳಿಗೆ ಬೇವು, ಸಿಲ್ವರ್, ಸೀಬೆ, ನಿಂಬೆ ಸೇರಿದಂತೆ ಇತರೆ ಜಾತಿಯ ಗಿಡಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಎಂದು ಮದುವೆಗೆ ಬಂದ ಅತಿಥಿ ರವೀಶ್‍ಮೂರ್ತಿ ಹೇಳಿದ್ದಾರೆ.