ಬಾಗಲಕೋಟೆ: ಹಸೆಮಣೆ ಏರಿದ ನವದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಸಸಿ ವಿತರಿಸಿ, ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ಮದುವೆ ಸಮಾರಂಭದಲ್ಲೂ ಪರಿಸರ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದ ಲೋಕೇಶ್ವರ ದೇವಸ್ಥಾನದಲ್ಲಿ ಈ ಮದುವೆ ನಡೆದಿದ್ದು, ವಿಕ್ರಮ ಗೋಳ್ ಮತ್ತು ಪೂಜಾ ಹಾಗೂ ಹೊಳಬಸಯ್ಯ ಗೋಳ್ ಮತ್ತು ದ್ರಾಕ್ಷಾಯಿಣಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳು ತಮ್ಮ ಮದುವೆಗೆ ಬಂದ ಅಥಿತಿಗಳಿಗೆ ಸಸಿ ವಿತರಿಸಿ ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದಾರೆ.
ಈ ನವದಂಪತಿಗಳು ಸಾವಿರ ಸಸಿಗಳನ್ನು ಮದುವೆಗೆ ಬಂದ ಅತಿಥಿಗಳಿಗೆ ವಿತರಣೆ ಮಾಡಿದ್ದು, ಖುಷಿ ಜೊತೆಗೆ ಪರಿಸರ ಪ್ರೇಮದ ಅರಿವು ಮೂಡಿಸಿದರು. ಮದುವೆಯಾದ ಜೋಡಿಗಳು ತಲಾ ಒಂದೊಂದು ಸಸಿಗಳನ್ನು ನೆಟ್ಟು ಪ್ರಕೃತಿ ದೇವತೆಯ ಆಶೀರ್ವಾದ ಪಡೆದರು.
ಇದೇ ವೇಳೆ ಮಾತನಾಡಿದ ದಂಪಂತಿಗಳು, ನಮ್ಮ ಸ್ಮೃತಿ ಪಟಲದಲ್ಲಿ ಹಚ್ಚಹಸಿರಾಗಿರಲಿದೆ. ಸಸಿಗಳನ್ನು ನೆಟ್ಟು ಪೋಷಿಸುವ ಪರಿಸರ ಕಾಳಜಿ ಎಲ್ಲರಲ್ಲಿ ಮೂಡಬೇಕಿದೆ. ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ. ಹೀಗಾಗಿ ನಾವು ಸಸಿ ವಿತರಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.