ಹಾಯ್ ಗಾನವಿ…. ನಿನ್ನನ್ನ ಕಂಡಾಗಿಂದ ನಾನೆಲ್ಲೋ ಕಳೆದು ಹೋಗ್ಬಿಟ್ಟಿದಿನಿ.. ಸ್ವಲ್ಪ ಹುಡುಕೋಕೆ ಹೆಲ್ಪ್ ಮಾಡ್ತೀಯಾ?… ನನ್ನೆಲ್ಲ ಆಸೆ ಕನಸೆಲ್ಲ ನಿನ್ನ ಕಣ್ಣಲ್ಲಿ ಕಾಣ್ತಿದಿನಿ.. ಇದೆಂತ ಒಗಟು ಅನ್ನಿಸ್ತಿದಿಯಾ..? ಇದಕ್ಕೆಲ್ಲ ನೀನೇ ಕಾರಣ..
ನಾನ್ ತುಂಬಾ ಮೆಚ್ಚಿದ ನಗು ನಿನ್ ಪುಟ್ಟ ಮುಖದ್ದು … ನಾನು ಕೇಳಿದ ಬಹಳ ಇಂಪಾದ ಧ್ವನಿ.. ನಿನ್ನ ಹೆಸರು! ಪ್ರಪಂಚದ ಎಲ್ಲಾ ಒಳ್ಳೆಯ ವಿಚಾರಗಳು ನಿನ್ನನ್ನೇ ನೆನಪಿಸುತ್ತೆ.. ನನ್ನ ಕನಸಿನ ಪ್ರತಿ ಸಲ್ಲಾಪದಲ್ಲೂ ನಿನ್ನ ಕೆನ್ನೆಯೇ ಇರುತ್ತೆ! ನಿನ್ನ ಪ್ರೇಮ ತುಂಬಿದ ಎದೆಯ ಮೇಲೆ ತಲೆಯಿಟ್ಟು ಅಮಲಿನಲ್ಲಿ ತೇಲಾಡುವ ಆ ಕನಸು. ನಿನ್ನ ಎದೆಗೆ ಕಿವಿಯಿಟ್ಟು ಬಡಿತದ ಲಯ ಆಲಿಸೋ ಆಸೆ… ಇದೆಲ್ಲ ಎಷ್ಟು ದೂರವೋ?
ಆ ಕೆನ್ನೆಯ ಅಂಗಳದಲ್ಲಿ ತುಟಿಯ ರಂಗೋಲಿ ಆಟಕ್ಕೆ ನಿನ್ನ ಒಪ್ಪಿಗೆ ಬೇಕು..! ಎದೆ ಬಡಿತದ ಹಾಡಿಗೆ ಕಿವಿಗೊಡಲು ನಿನ್ನ ಒಲವಿನ ಸೆರಗನ್ನ ನನ್ನ ಕೈಗೆ ಒಪ್ಪಿಸಬೇಕು.. ಹೀಗೆ ನಿನ್ನ ಕಂಡರೆ ಅದೆಷ್ಟೋ ತುಂಟ ತುಂಟ ಆಸೆಗಳು.. ಮನದ ಛಾವಣಿಗೆಲ್ಲ ಮಲ್ಲಿಗೆಯ ಬಳ್ಳಿಯಂತೆ ಹಬ್ಬಿ ನೂರಾರು ಹೂ ಬಿಟ್ಟು ಕಾದಿವೆ..! ನಿನ್ನ ಕಣ್ಣಲ್ಲಿ ಚೆಂದವಾಗಿ ಕಾಣೋಕೆ ಎಷ್ಟೆಲ್ಲ ಪಡಬಾರದ ಪಾಡು ಪಡ್ತಿದಿನಿ.. ನಿನ್ನ ಮುಂದೆ ಹೀರೋ ಆಗ್ಬೇಕು ಅಂತ ಅದೆಷ್ಟು ಒದ್ದಾಡಿದಿನಿ ಗೊತ್ತಾ.. ಮೈ ಡಿಯರ್ ಹೀರೋಯಿನ್..!
ನಾನಂತೂ, ನಿನ್ನ ಕುಡಿ ನೋಟದ ಬಲೆಗೆ ಸಿಕ್ಕ ಮೀನಾಗಿ ಹೋಗಿದ್ದೇನೆ.. ನನ್ನ ಆಸೆಗಳು.. ಎದೆಯ ಮಾತುಗಳನ್ನು ಬರೆದು ನಿನ್ನ ಕೈಗಿಟ್ಟಿದ್ದೇನೆ.. ನೋಡು ಯೋಚ್ನೆ ಮಾಡು… ನಿನ್ನ ಕಣ್ಣಿನ ಬಲೆಯಲ್ಲಿ ಕೊನೆ ತನಕ ಸೆರೆಯಾಗೇ ಉಳಿಬೇಕು ಅಂತ ತುಂಬಾ ಆಸೆ… ಒಪ್ಕೋತಿಯಾ ಪ್ಲೀಸ್..?
ಇಂತಿ ನಿನ್ನ ಪ್ರೀತಿಯ……. ಗೆಳೆಯ…

