ಹಾಯ್ ಸ್ವೀಟ್ ಹಾರ್ಟ್
ನನ್ನ ಕಣ್ಮುಂದೆ ಹೀಗೆ ಬಂದು ಹಾಗೇ ಹೋಗ್ಬಿಡ್ತಿಯಲ್ಲ, ಎಲ್ಲಿ ತುಂಬಾ ದಿನ ಆಯ್ತು ನಿನ್ನ ಸುಳಿವೇ ಇಲ್ಲ? ನಿನಗಾಗಿ ನಾನೆಷ್ಟು ಕಾಯ್ತಾ ಇದಿನಿ ಅಂತ ಗೊತ್ತಾ? ನಿನ್ನ ಮನಸ್ಸು ಈ ರೀತಿ ಯಾವ ಸೂಚನೆನೂ ಕೊಡ್ತಿಲ್ವಾ?
ನನಗೆ ಮಾತ್ರ ಯಾವ ಬೈಕ್ ಶಬ್ಧ ಆದ್ರೂ ನೀನೇ ಬಂದ ಹಾಗೆ ಫೀಲ್ ಆಗುತ್ತೆ. ದೂರದಲ್ಲಿ ಕನ್ನಡಕ ಹಾಕೊಂಡು, ಇನ್ ಶರ್ಟ್ ಮಾಡ್ಕೊಂಡು ಯಾರೇ ಬಂದ್ರೂ ನೀನೇ ಇರಬೇಕು ಅನ್ಸುತ್ತೆ. ಡ್ಯೂಟಿ ಮುಗಿಸಿ ಮನೆಗೆ ಹೋಗ್ಬೇಕಾದ್ರೆ ಆ ತಿರುವಲ್ಲಿ ನೀನು ಹೀಗೆ ಬಂದು ಬಿಡ್ತಿಯೇನೋ ಅಂತ ಎಷ್ಟೋ ಸಲ ಅನ್ಸಿದೆ. ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್!
ಹೀಗೆಲ್ಲ ಮನಸ್ಸಲ್ಲಿ ಯೋಚನೆಗಳು ಬರುವಾಗ ಈ ಒಂದು ಹಾಡು ನನ್ನನ್ನ ತುಂಬಾ ಕಾಡುತ್ತೆ ಕಣೋ.
ʻಓ ಸಾಥಿ ರೇ.. ತೇರೇ ಬಿನಾ ಭೀ ಕ್ಯಾ ಜೀನಾ…
ಫೂಲೋ ಮೇ, ಕಲಿಯೋ ಮೇ, ಸಪ್ನೋ ಕಿ ಗಲಿಯೋ ಮೇ
ತೇರೇ ಬಿನಾ ಕುಚ್ ಕಹೀ ನಾ, ತೇರೇ ಬಿನಾ ಭೀ ಕ್ಯಾ ಜೀನಾ…ʼ ಈಗೀಗ ನಿನ್ನ ನೆನಪಲ್ಲೇ ದಿನ ಪೂರ್ತಿ ಈ ಹಾಡನ್ನ ಹೇಳ್ತಾ ಇರ್ತಿನಿ.
ನೀನು ಎಲ್ಲಾದ್ರೂ ಹೇಳ್ದೇ ಕೇಳ್ದೇ ಬೆಂಗ್ಳೂರಿಂದ ಬಂದ್ಬಿಟ್ರೆ ಅಂತ ನಾನೆಷ್ಟು ಚೆಂದ ರೆಡಿ ಆಗಿ ಓಡಾಡ್ತಿನಿ ಗೊತ್ತಾ? ನೀನು ಇಷ್ಟಪಡೋ ಕಲರ್ ಡ್ರೆಸ್, ನೀನು ಇಷ್ಟ ಪಡೋ ಡಿಸೈನ್ ಕಿವಿಯೋಲೆ, ಹಾ, ಯಾವಾಗ್ಲೂ ಕುಂಕುಮ ಇಡು ಅಂತ ಹೇಳ್ತಿರ್ತಿಯಲ್ಲ.. ಆಗೆಲ್ಲ ನಿನ್ನ ರೇಗಿಸಬೇಕು ಅಂತಾನೇ ಇಡ್ತಿರಲಿಲ್ಲ. ಈಗ ದಿನ ಇಟ್ಕೊಳ್ತೀನಿ. ನೀನು ಬೇಗ ಬಂದು ನೋಡ್ಬೇಕು ಇದನ್ನೆಲ್ಲ.

ನೀನು ಬಂದಾಗ ತುಂಬಾ ಮಾತಾಡೋದಿದೆ. ನಿನಗಾಗಿ ಕೊಡೋದಕ್ಕೆ ಮುತ್ತಿನ ಹಾರನಾ ತುಟಿ ಚಿಪ್ಪಲ್ಲಿ ಪೋಣಿಸಿಟ್ಟಿದ್ದಿನಿ. ಆದ್ರೆ ಏನ್ ಮಾಡೋದು.. ನೀನು ಜೊತೆಲ್ಲಿ ಇದ್ದಾಗ ಜಾಸ್ತಿ ಗಲಾಟೆ ಮಾಡ್ಬೇಕು ಅನ್ಸುತ್ತೆ. ಆಗೆಲ್ಲ ನೀನೇ ನನ್ನ ಸಮಾಧಾನ ಮಾಡ್ಬೇಕಪ್ಪ. ಅದು ಬಿಟ್ಟು ಹೀಗೆಲ್ಲ ಕೈಗೆ ಸಿಗದ ಹಾಗೆ ಕಳೆದು ಹೋಗ್ಬಾರದು ನೀನು.
ನಿನ್ನ ತುಂಟಾಟ, ನಿನ್ನ ಮುದ್ದು ಮುದ್ದು ಮಾತು, ಅಪ್ಪುಗೆ, ಆ ಕುಡಿ ನೋಟದ ನಗು ನೋಡದೆ ತುಂಬಾ ಚಡಪಡಿಸ್ತಾ ಇದಿನಿ. ಬೇಗ ಬಾ ಪ್ಲೀಸ್. ಈ ಸಲ ಬೆಂಗ್ಳೂರಿಂದ ಬಂದವನು ಇಲ್ಲೇ ಇದ್ದುಬಿಡು. ಮನೆಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆ ಆಗ್ಬಿಡೋಣ ಏನಂತಿಯಾ? ಮೊದಲು ಬಾ ನೀನು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ನಿನ್ನವಳು
