ನಾನು ಮತ್ತವಳು ನೆಟ್ಟ ಪ್ರೇಮ ಪಾರಿಜಾತದ (Parijata) ಗಿಡ ಈ ವರ್ಷ ಹೂ ಬಿಟ್ಟಿದೆಯಂತೆ. ಮೊನ್ನೆ ಅವಳು ಫೋನ್ ಮಾಡಿದಾಗ ಇದೇ ಮಾತು..! ಹೂ ಬಿಟ್ಟಿದೆ ಗೋಪಾಲ.. ಅದೆಷ್ಟು ಚೆಂದ.. ಚಂದ್ರನ ಹಣೆಗೆ ಪುಟ್ಟ ಬೊಟ್ಟಿಟ್ಟಂತೆ..! ಅದೆಷ್ಟು ಪರಿಮಳ.. ನಿನಗೆ ಇದೆಲ್ಲ ಗೊತ್ತಾಗಲ್ಲ.. ಬೆಂಗ್ಳೂರಲ್ಲಿ ಇರೋನಿಗೆ ಇದು ಹೇಗೆ ಗೊತ್ತಾಗುತ್ತೆ? ಹೂ ಬಿಡೋ ಕಾಲ ಮುಗಿಯೋದ್ರೊಳಗೆ ಬಂದು ನೋಡು…. ನಾನಂತೂ ಇಂತಹ ಹೂವನ್ನ ನನ್ನ ಜೀವನದಲ್ಲೇ ನೋಡಿಲ್ಲ ಗೊತ್ತಾ?
ಅವಳು ಹೇಳುವ ಮಾತುಗಳು ಅದೆಷ್ಟು ಮುದ್ದಾಗಿದ್ದವು ಅಂದ್ರೆ, ಬಹುಶಃ ಪ್ರಪಂಚದ ಯಾವ ಗಿಡಗಳೂ ಹೂ ಬಿಟ್ಟಿಲ್ಲವೇನೋ, ನಾವಿಬ್ರೂ ನೆಟ್ಟ ಈ ಗಿಡ ಮಾತ್ರ ಹೂ ಬಿಟ್ಟಿರಬೇಕು..! ನನಗೂ ಹೌದು ಅಂತಾನೆ ಅನ್ನಿಸ್ತಿದೆ..! ಪ್ರಪಂಚದ ಯಾವ ಗಿಡವೂ ಹೂ ಬಿಟ್ಟಿರಲು ಸಾಧ್ಯವಿಲ್ಲ.. ಈ ಗಿಡ ಮಾತ್ರ ಹೂ ಬಿಟ್ಟಿದೆ.. ಬೇರೆ ಎಲ್ಲಾ ಬರಿ ಎಲೆಗಳ ರೂಪ ಎನ್ನುವಷ್ಟು ಮಾತಿನ ಮೋಡಿ ಮಾಡಿಬಿಟ್ಲು!
ಆ ಪಾರಿಜಾತ ಗಿಡ.. ಅದನ್ಯಾಕೆ ನೆಟ್ಟಿದ್ದು, ಆ ದಿನ ಏನೆಲ್ಲ ಆಯ್ತು ಅನ್ನೋದೆಲ್ಲ ಸಿಹಿ ನೆನಪೋ, ಕಹಿ ನೆನಪೋ ಅನ್ನೋದೇ ನನಗಿನ್ನೂ ಗೊಂದಲ! ಅವತ್ತು ನಾವಿಬ್ರೂ ಕೆಲಸ ಮಾಡ್ತಿದ್ದ ಆ ಲ್ಯಾಬ್‌ನಿಂದ ಜೊತೆಲೇ ಹೊರಟ್ವಿ, ಅದೇ ಮೊದಲು ಹಾಗೆ ಇಬ್ಬರೂ ಒಟ್ಟಿಗೆ ಬಂದಿದ್ದು.. ಹಾಗೇ ಸ್ವಲ್ಪ ದೂರ ಮಾತಾಡ್ತ ಬಂದ ಮೇಲೆ ಒಂದು ಟೀ ಕುಡಿತ, ಏನೋ ಮಾತಾಡ್ತ… ಗೋಪಾಲ ನೀನು ಈ ಲ್ಯಾಬ್ ಬಿಟ್ಟು ಹೋಗ್ಬಿಡ್ತಿಯಾ ಅಲ್ವಾ? ಅಂತ ಕೇಳಿದ್ಲು…. ಹೌದು ನಾನು ಏನೋ ಪ್ಲ್ಯಾನ್ ಮಾಡಿದಿನಿ… ಸ್ವಲ್ಪ ದಿನದಲ್ಲಿ ಬಿಟ್ಟು ಹೋಗ್ತಿನಿ… ಅಂದೆ. ಇನ್ನೇನೂ ಕೊನೆಯ ಸಿಪ್ ಇತ್ತು… ಆಗ.. ಗೋಪಾಲ ಅಲ್ಲಿ ಕಾಣಿಸ್ತಿದಿಯಲ್ಲ, ಆ ಜಾಗದಲ್ಲಿ ಒಂದು ಗಿಡ ನೆಡೋಣ್ವಾ… ನೀನು ಇಲ್ಲಿಂದ ಬಿಟ್ಟು ಹೋದ್ಮೇಲೆ ಎಷ್ಟೋ ವರ್ಷ ಆದ್ಮೇಲೆ ಮತ್ತೆ ಬರ್ತಿಯ ಅಲ್ವಾ? ಆಗ ಆ ಗಿಡ ನೋಡಿ ನಾನು ನಿನಗೆ ನೆನಪಾಗ್ಬೇಕು… ನನಗೂ ಅಷ್ಟೇ ಆ ಗಿಡ ನೋಡಿದಾಗಲೆಲ್ಲ ನೀನು ನೆನಪಾಗಬೇಕು ಅಂತ ಹೇಳಿದ್ಲು.. ನಾನು ಸಣ್ಣ ಸ್ಮೈಲ್ ಮಾಡಿ ಹುಂ ಆಂತ ಹೇಳಿ ಹೊರಟೆ..!
ಇವಳ್ಯಾಕೆ ಇಷ್ಟೊಂದು ಮಾತಾಡಿದ್ಲು? ಯಾಕೆ ಈ ನೆನಪು? ನನಗೆ ಏನೂ ಅರ್ಥ ಆಗಲಿಲ್ಲ.. ಮತ್ತೆ ಮನೆಗೆ ಬಂದಾಗ ಕಾಲ್ ಮಾಡಿ… ಅದೇ ಮಾತು… ಗೋಪಾಲ, ಅಲ್ಲಿ ಗಿಡ ನೆಟ್ರೆ ಹೂ ಬಿಡತ್ತೆ ಅಲ್ವಾ? ತುಂಬಾ ಹಕ್ಕಿಗಳು ಅದರ ಮೇಲೆ ಕೂತು ಮಾತಾಡ್ತವೆ ಅಲ್ವಾ? ಮಳೆ ಬಂದಾಗ ಒಂದೊಂದೆ ಹನಿ ಎಲೆಗಳಿಂದ ಬೀಳ್ತಾವೆ ಅಲ್ವಾ..? ನಾನು ಸುಮಾರು ಒಂದು ಗಂಟೆ ಹುಂ, ಹುಂ ಅಂತಾನೆ ಇದ್ದೇ…. ಕೊನೆಗೆ ನಾಳೆನೆ ಗಿಡ ತಂದು ಬಿಡು ಆಯ್ತಾ.. ನಿನಗೆ ಯಾವುದು ಇಷ್ಟಾನೋ ಅದು… ಇರಲಿ ಗಿಡ ಅಲ್ವಾ, ನೆಟ್ಟು ಬಿಡೋಣ… ಮಲ್ಕೋ ಇವಾಗ ಅಂತ ಹೇಳಿ ಫೋನ್ ಇಟ್ಟಾಯ್ತು..!
ಮಾರನೇ ದಿನ ನನಗೆ ಆ ವಿಚಾರವೇ ನೆನಪಿಲ್ಲ… ಸ್ವಲ್ಪ ಲೇಟ್ ಆಗಿ ಲ್ಯಾಬ್‌ಗೆ ಹೋದೆ.. ಅವಳು ಬೇಗ ಬಂದ್ರೂ ಲ್ಯಾಬ್ ಒಳಗೆ ಹೋಗದೇ ಕಾಯ್ತಾ ಇದ್ಲು… ಹೋದ ತಕ್ಷಣ ಕೇಳಿದ್ದು ಗಿಡ.. ನನಗೆ ನೆನಪಾಗಿದ್ದು ಅವಳು ಕೇಳಿದ್ಮೇಲೆ..!! ಯಾಕೋ ತಂದಿಲ್ಲ..? ನನ್ನ ಮಾತು ಕೇಳಲ್ಲ ಅಲ್ವಾ ನೀನು… ಹಾಗಂದವಳೆ ತುಂಬಾ ಅತ್ತು ಬಿಟ್ಲು..! ಆ ಅಳು ಯಾಕೆ ಅಂತ ನನಗೆ ಇವತ್ತಿಗೂ ಅರ್ಥ ಆಗಿಲ್ಲ.
ಆ ದಿನ ಪೂರ್ತಿ ಮೌನವಾಗಿ ಕೆಲಸ ಮಾಡಿ ಬಂದಾಯ್ತು. ಮನೆಗೆ ಬಂದ್ಮೇಲೆ ಕಾಲ್ ಬಂತು, ನಾನೇ ಕಾಲ್ ಮಾಡ್ಬೇಕಾ? ಸಾಹೇಬ್ರಿಗೆ ಪ್ರಸ್ಟೀಜ್ ಕಡ್ಮೆ ಆಗ್ಬಿಡುತ್ತಾ ನೀವಾಗೇ ಕಾಲ್ ಮಾಡಿದ್ರೆ? ನೋಡು ಮತ್ತೆ ನಾಳೆ ಆದ್ರೂ ಗಿಡನ ತಗೋ ಬಾ ಪ್ಲೀಸ್ ಗೋಪಾಲ! ಈ ಥರ ರಿಕ್ವೆಸ್ಟ್ ಅಲ್ಲದ ಆಜ್ಞೆ ಆಯ್ತು..!
ನನ್ನ ಪುಣ್ಯಕ್ಕೆ ನಮ್ಮಮ್ಮ ಅವತ್ತೇ ಒಂದು ಪಾರಿಜಾತದ ಗಿಡ ತಂದು ನಾಳೆ ನೆಡೋದಕ್ಕೆ ಪ್ಲ್ಯಾನ್ ಮಾಡಿದ್ರು… ನಾನು ರಾತ್ರಿ ರಾತ್ರಿನೇ.. ಗಿಡನ ಪ್ಯಾಕ್ ಮಾಡಿ, ಆ ಗಿಡವನ್ನ ದನ ತಿಂದು ಹಾಕಿದೆ ಅನ್ನೋ ಹಾಗೆ ಒಂದು ಸೆಟ್ ಕ್ರಿಯೆಟ್ ಮಾಡಿ.. ಸ್ಕ್ರಿಪ್ಟ್ ಬರೆದ್ಬಿಟ್ಟೆ…! ಅಮ್ಮ ಇವತ್ತಿಗೂ ಆ ಗಿಡ ನಮ್ಮನೆಯಲ್ಲಿ ಆಗಿದ್ದ ಪುಟ್ಟ ಕರು ಚಿಂಟುನೇ ತಿಂದಿದ್ದು ಅಂತ ನಂಬಿದ್ದಾರೆ..! ಅಂತ್ರೂ ಮರುದಿನ ಗಿಡ ತಗೊಂಡು ಹೋದೆ.. ಅವಳ ಸಂಭ್ರಮ ಅದೆಷ್ಟಿತ್ತು ಅಂದ್ರೆ….! ಬಹುಶಃ ನಾನು ಆ ಗಿಡ ತಗೊಂಡು ಹೋಗದೇ ಇದ್ರೆ ನಾನು ಅವಳ ಆ ಸಂಭ್ರಮನ ನೋಡೋ ಆ ಕ್ಷಣಗಳನ್ನ ಕಳೆದ್ಕೊಂಡು ಬಿಡ್ತಿದ್ದೆ. ಆ ಸಂಭ್ರಮದಲ್ಲಿ ಅವಳ ಕಣ್ಗಳು ನಾನೇ ಜಗತ್ತು ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದವು!
ನಮ್ಮ ರವಿ ಸರ್ ಕಾರು ನಿಲ್ಸೋ ಜಾಗದಲ್ಲಿ ಆ ಗಿಡ ಮುಚ್ಚಿಟ್ಟು, ಸಂಜೆ ಮನೆಗೆ ಹೋಗುವಾಗ ತಂದು ಶಿವಗೋಪಾಲಕೃಷ್ಣ ದೇವಾಲಯದ ಬಳಿ ನೆಟ್ವಿ…! ನೆಡುವಾಗ ಒಂದು ಮಾತು ಹೇಳಿದ್ಲು.. ನೀನು ಹೀಗೆ ಈ ಮನಸಲ್ಲಿ ಬೇರು ಬಿಟ್ಟುಬಿಟ್ಟಿದಿಯ… ಆದ್ರೆ ನೀನು ನನಗೆ ಸಿಗಲ್ಲ ಗೊತ್ತು.. ಮುಂದೆ ಈ ಗಿಡ ಹೂ ಬಿಟ್ಟ ಹಾಗೆ, ನೆನಪುಗಳು ಹೂ ಬಿಡ್ತಾವೆ ಗೋಪಾಲ… ಅಲ್ವಾ?! ಹೌದು ಇವತ್ತು ಗಿಡ ಮಾತ್ರ ಅಲ್ಲ.. ಮನಸ್ಸಲ್ಲಿ ನೆನಪುಗಳು ಹೂ ಬಿಟ್ಟು ಪರಿಮಳ ಸೂಸ್ತಿದೆ..!
ಆ ಗಿಡ ಇವತ್ತು ಮರ ಆಗಿದೆಯಂತೆ.. ಹೂ ಬಿಟ್ಟಿದೆಯಂತೆ.. ಆ ದಿನ ಗಿಡ ಕಂಡು ಸಂಭ್ರಮಿಸಿದಂತೆ ಅವಳು ಸಂಭ್ರಮಿಸಿ ಕಾಲ್ ಮಾಡಿ… ಮಾತಾಡಿದ್ಲು..! ಬಂದು ನೋಡು ನೀನು ಆ ಪಾರಿಜಾತ ಎಷ್ಟು ಚೆನ್ನಾಗಿ ಹೂ ಬಿಟ್ಟಿದೆ..! ನೀನು ಅದನ್ನ ನೋಡಿ ನನ್ನ ನೆನಪು ಮಾಡ್ಕೋ.. ಅಲ್ಲೆಲ್ಲೋ ಹೋಗಿ ನನ್ನ ಮರೆತು ಬಿಟ್ಟಿದಿಯಾ ಅಲ್ವಾ ಅಂತ ಕಾಲ್ ಕಟ್ ಮಾಡಿದ್ಲು..! ಅದಕ್ಕೆ ಇದೇ ತಿಂಗಳು ನಾಲ್ಕು ದಿನ ರಜೆ ತಗೊಂಡು ಹೋಗ್ತಿದಿನಿ..!
– ಗೋಪಾಲಕೃಷ್ಣ