ಬೆಂಗಳೂರು: ಗುರುವಾರ ಕೆಎಸ್‍ಆರ್ ಟಿಸಿಯ ರಾತ್ರಿ ಬಸ್ ಗಳಲ್ಲಿ ಒಂದು ವಿಶೇಷ ಪ್ರಕಟಣೆ ಹೊರಡಿಸಿದ್ದರು. ಬಸ್‍ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಬಗ್ಗೆ ಗೌರವದಿಂದ ನಡೆದುಕೊಳ್ಳುವಂತೆ ಹಾಗೂ ಆಕಸ್ಮಾತ್ ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ಅದನ್ನು ಚಾಲಕರು ಮತ್ತು ನಿರ್ವಾಹಕರ ಗಮನಕ್ಕೆ ತರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಯಾರಾದರೂ ಮಹಿಳೆಯರಿಗೆ ಕಿರುಕುಳ ಕೊಟ್ಟರೆ ಸಹ ಪ್ರಯಾಣಿಕರು ಮಹಿಳೆಯರ ಪರವಾಗಿ ನಿಂತು, ಲೈಂಗಿಕ ಕಿರುಕುಳ ನೀಡುವವರ ಬಗ್ಗೆ ನಿರ್ವಾಹಕರಿಗೆ ತಿಳಿಸುವಂತೆಯೂ ತಿಳಿಸಲಾಯಿತು. ವಿಮಾನದಲ್ಲಿ ರಕ್ಷಣಾ ಕ್ರಮಗಳ ಬಗ್ಗೆ ಪ್ರಕಟಣೆ ನೀಡುವಂತೆ, ಬಸ್‍ಗಳಲ್ಲಿ ಮಹಿಳೆಯರ ಬಗ್ಗೆ ಗೌರವದಿಂದ ನಡೆದುಕೊಳ್ಳುವಂತೆ ಹಾಗೂ ಯಾರಾದ್ರೂ ಉಪಟಳ ನೀಡಿದರೆ ಮಹಿಳೆಯರು ಧೈರ್ಯದಿಂದ ಚಾಲಕರು ಮತ್ತು ನಿರ್ವಾಹಕರಿಗೆ ತಿಳಿಸುವಂತೆ ಹೇಳಲಾಯಿತು.
Advertisement
Advertisement
ಬೆಳಗ್ಗೆ ಮಹಿಳೆಯರು ಬಸ್ಸಿನಿಂದ ಇಳಿಯುವಾಗ ನಿರ್ವಾಹಕರು ಮಹಿಳೆಯರನ್ನು, ಪ್ರ್ರಯಾಣದ ಸಮಯದಲ್ಲಿ ಏನಾದರೂ ತೊಂದರೆ ಆಯಿತಾ? ಎಂದು ಕೇಳುವಂತೆಯೂ ಸೂಚನೆ ನೀಡಲಾಗಿದೆ. ಈ ಮೂಲಕ ಬಸ್‍ಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಯಂತ್ರಿಸುವುದು ಉದ್ದೇಶವಾಗಿದೆ. ಇಡೀ ದೇಶದಲ್ಲೇ ಇದೊಂದು ವಿಶೇಷ ಕ್ರಮವಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಹಾಗೂ ಜನ ಸಾಮಾನ್ಯರಲ್ಲಿ ಲಿಂಗತ್ವ ಸಂವೇದನೆಯನ್ನು ಬೆಳೆಸಲು ಇದು ಉತ್ತಮ ಕ್ರಮ ಎನ್ನಿಸುತ್ತಿದೆ.