ಬೆಂಗಳೂರು: ರಾಣೇಬೆನ್ನೂರು ಶಾಸಕ ಆರ್.ಶಂಕರ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮೂವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಹೊಳಿಸಿ ಅದೇಶಿಸಿದರು. ಇನ್ನುಳಿದ ರಾಜೀನಾಮೆ ನೀಡಿರುವ ಶಾಸಕರ ಪ್ರಕರಣಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುತ್ತೇನೆ. ಅನರ್ಹಗೊಂಡಿರುವ ಶಾಸಕರು 15 ವಿಧಾನಸಭೆ ಅವಧಿ ಅಂದ್ರೆ 3 ವರ್ಷ 10 ತಿಂಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ರು.
Advertisement
ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಜುಲೈ 6ರಂದು ನನ್ನ ಕಚೇರಿಗೆ ಬರುತ್ತೇನೆ ಮೊದಲೇ ಹೇಳಿರಲಿಲ್ಲ. ನಾನು ಕಚೇರಿಯಿಂದ ಹೋದ ಮೇಲೆ ಕೆಲ ಶಾಸಕರೊಂದಿಗೆ ಬಂದು ನಮ್ಮ ಕಾರ್ಯದರ್ಶಿಗೆ ರಾಜೀನಾಮೆ ನೀಡಿ ತೆರಳಿದ್ದರು. ಆದ್ರೆ ಕೆಲ ರಾಜೀನಾಮೆಗಳ ಕ್ರಮಬದ್ಧವಾಗಿರಲಿಲ್ಲ. ಹಾಗಾಗಿ ಮತ್ತೊಮ್ಮೆ ನಿಯಮ 202ರನ್ವಯ ಇಚ್ಛೆಯಿದ್ದಲ್ಲಿ ರಾಜೀನಾಮೆ ಸಲ್ಲಿಸಬಹುದು ಎಂದು ನೋಟಿಸ್ ಕಳುಹಿಸಲಾಗಿತ್ತು. ನಂತ್ರ ಸಾಮೂಹಿಕವಾಗಿ ಎಲ್ಲರು ಬಂದು ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ಬಳಿಕ ವಿಚಾರಣೆಗೆ ಕರೆದ್ರೂ ಯಾವ ಶಾಸಕರು ಬಂದಿಲ್ಲ. ಅದೇ ರೀತಿ ಮಹೇಶ್ ಕುಮಟಳ್ಳಿ ಅವರನ್ನು ರಾಜೀನಾಮೆಗೂ ಮೊದಲೇ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಸಿಎಲ್‍ಪಿ ನಾಯಕರು ದೂರು ನೀಡಿದ್ದರು.
Advertisement
Advertisement
ರಾಣೇಬೆನ್ನೂರು ಶಾಸಕ ಆರ್.ಶಂಕರ್ ಕೆಪಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜೂನ್ 14, 2019ರಂದು ಆರ್. ಶಂಕರ್ ನನಗೆ ಪತ್ರ ಬರೆದು ಶೆಡ್ಯೂಲ್ 10ರ ಪ್ರಕಾರ ಕೆಪಿಜೆಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದ್ದೇನೆಂದು ಹೇಳಿದ್ದರು. ಈ ಸಂಬಂಧ ಕಾಂಗ್ರೆಸ್ ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರು ಕೆಪಿಜೆಪಿ ವಿಲೀನದ ಬಗ್ಗೆ ಪತ್ರ ಬರೆದಿದ್ದರು. ನಂತರ ಮೈತ್ರಿಗೆ ನೀಡಿದ ಬೆಂಬಲ ವಾಪಾಸ್ ಪಡೆದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ವಿಚಾರಣೆಗೆ ಕರೆದಾಗ ನಾಲ್ಕು ವಾರಗಳ ಸಮಯ ಬೇಕೆಂದು ಮೇಲ್ ಮಾಡಿದ್ದಾರೆ.
Advertisement
ಪಕ್ಷೇತರ ಶಾಸಕ ಆರ್.ಶಂಕರ್ ಮೈತ್ರಿ ಸಂಪುಟ ಸೇರ್ಪಡೆಯ ಮುನ್ನವೇ ತಮ್ಮ ಪಕ್ಷ ಕೆಪಿಜೆಪಿಯನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವಾಸಮತ ಕಲಾಪಕ್ಕೆ ಗೈರಾಗಿದ್ದರಿಂದ ಆರ್.ಶಂಕರ್ ಅವರನ್ನು ಸಹ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಸ್ಪೀಕರ್ ಬಳಿ ಮನವಿ ಮಾಡಿಕೊಂಡಿತ್ತು. ಉಳಿದಂತೆ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಶ್ರೀಮಂತ್ ಪಾಟೀಲ್, ಆನಂದ್ ಸಿಂಗ್, ಕೆ.ಸುಧಾಕರ್, ಎಂಟಿಬಿ ನಾಗರಾಜ್, ನಾರಾಯಣಗೌಡ, ಹೆಚ್.ವಿಶ್ವನಾಥ್ ಮತ್ತು ಗೋಪಾಲಯ್ಯರ ಮೇಲೆ ಇನ್ನು ಅನರ್ಹತೆ ತೂಗುಗತ್ತಿ ನೇತಾಡುತ್ತಿದೆ.