ಬೆಂಗಳೂರು: ವಿಧಾನಸಭೆ ಅಧಿವೇಶನ ಶುರುವಾದಾಗ ಸಿಎಂ ತಾನಾಗಿಯೇ ವಿಶ್ವಾಸದಿಂದ ಗುರುವಾರ ವಿಶ್ವಾಸಮತ ಸಾಬೀತುಪಡಿಸುವುದಾಗಿ ಹೇಳಿದ್ದರು. ಆದರೆ ಆ ಬಳಿಕ ನಡೆದಿದ್ದು ಕೇವಲ ಡ್ರಾಮಾ ಎಂದೇ ಹೇಳಬಹುದು. ಗುರುವಾರ 11 ಗಂಟೆ ಕಳಿತವರು ಸಂಜೆಯಾದರೂ ಮುಖ್ಯಮಂತ್ರಿಗಳ ಬಾಯಲ್ಲಿ ವಿಶ್ವಾಸದ ಮಾತೇ ಬರಲಿಲ್ಲ. ಹೀಗಾಗಿ ರಾತ್ರಿ ಬಿಜೆಪಿ ಅಹೋರಾತ್ರಿ ಧರಣಿ ನಡೆಸಿತ್ತು.
ಇತ್ತ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರ ವರೆಗೆ ಡೆಡ್‍ಲೈನ್ ಕೊಟ್ಟರು. ಆದರೂ ಕೇವಲ ಚರ್ಚೆಯಲ್ಲಿ ಕಾಲಹರಣವಾಯ್ತೇ ಹೊರತು ಸಿಎಂ ವಿಶ್ವಾಸದಲ್ಲಿರುವಂತೆ ಕಾಣಲೇ ಇಲ್ಲ. ಹೀಗಾಗಿ ರಾಜ್ಯಪಾಲರು ಇನ್ನೊಂದು ಡೆಡ್‍ಲೈನ್ ಕೊಟ್ಟರು. 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸಲೇಬೇಕು ಎಂದು ನಿರ್ದೇಶಿಸಿದರು. ಆದರೂ ದೋಸ್ತಿಗಳು ಕ್ಯಾರೇ ಅನ್ನದೆ ರಾಜ್ಯಪಾಲರ ಮಾತನ್ನೇ ಧಿಕ್ಕರಿಸಿದರು. ಬಳಿಕ ಸಂಜೆ 7.30ಕ್ಕೆ ಸಮಯ ನಿಗದಿ ಮಾಡಲಾಯ್ತು.
ಇದರ ನಡುವೆ 7.30ಯೊಳಗೆ ವಿಶ್ವಾಸಮತ ಪ್ರಕ್ರಿಯೆ ಮುಗಿಯತ್ತದೆ ಎನ್ನಲಾಗುತ್ತಿತ್ತು. ಆದರೆ ಮತ್ತೆ ಸದನ ಆ ಚರ್ಚೆ, ಈ ಚರ್ಚೆ ಎಂದು ಕಾಲಹರಣದಲ್ಲೇ ಸಾಗಿತು. ಏಳೂವರೆ ಆಗುತ್ತಿದ್ದಂತೆ ಮತ್ತೆ ಸೋಮವಾರಕ್ಕೆ ಮುಂದೂಡಲು ಕಾಂಗ್ರೆಸ್-ಜೆಡಿಎಸ್ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತು. ಆಗ ಯಡಿಯೂರಪ್ಪ ಮಾತನಾಡಿ, ಸ್ಪೀಕರ್ ಬಗ್ಗೆ ಗೌರವವಿದೆ. ರಾತ್ರಿ 11-12 ಗಂಟೆಯಾಗಲಿ. ಎಲ್ಲವೂ ಇವತ್ತೇ ಮುಗಿಯಲಿ ಎಂದು ಒತ್ತಾಯಿಸಿದರು.
ಇದಕ್ಕೆ ಎದ್ದುನಿಂತ ಸಿಎಂ, ಎಲ್ಲಾ ಸದಸ್ಯರು ಮಾತಾನಾಡಿದ ಬಳಿಕ ಮೈತ್ರಿ ಸರ್ಕಾರದ ಕಾರ್ಯಕ್ರಮದ ಪ್ರಸ್ತಾಪ ಮಾಡಬೇಕು. ಸದಸ್ಯರಿಗೆ ಮಾತಾನಾಡಲು ಅವಕಾಶ ಕೊಡಿ. ಅದಾದ ಬಳಿಕ ವಿಶ್ವಾಸಮತ ಯಾಚನೆ ಎಂದು ಹೇಳಿದ್ರೆ, ನಾವು ಅಧಿಕಾರ ದುರುಪಯೋಗ ಮಾಡಿಕೊಳ್ಳಲ್ಲ. ಸೋಮವಾರಕ್ಕೆ ಮುಂದೂಡಿ ಎಂದು ರೇವಣ್ಣ ಮನವಿ ಮಾಡಿದರು.
ಇತ್ತ ಸಿದ್ದರಾಮಯ್ಯ ಮಾತನಾಡಿ, ನಾವು ಓಡಿ ಹೋಗೋದಿಲ್ಲ. ವಿಶ್ವಾಸಮತ ಯಾಚನೆ ಅಂತಿಮವಾಗಲೇ ಬೇಕು. ಸೋಮವಾರ ಮಾತಾನಾಡುವ ಸದಸ್ಯರು ಪಾಲ್ಗೊಳ್ಳಲಿ. ಸೋಮವಾರ ಅಂತಿಮ ಮಾಡೋಣ ಎಂದು ಹೇಳಿದರು.
ಎಲ್ಲವನ್ನೂ ನೋಡಿದ ಸ್ಪೀಕರ್ ರಮೇಶ್ ಕುಮಾರ್ ಕೊನೆಗೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಒಟ್ಟಿನಲ್ಲಿ ಇದರಿಂದ ದೋಸ್ತಿಗಳಿಗಂತೂ 2 ದಿನ ಜೀವದಾನ ಸಿಕ್ಕಿದಂತಾಗಿದೆ. ರಾಜ್ಯ ರಾಜಕೀಯ ಡ್ರಾಮಾದ ಮುಂದಿನ ಎಪಿಸೋಡ್‍ಗೆ ಸೋಮವಾರದವರೆಗೆ ಕಾಯಲೇಬೇಕು.