ಲಕ್ನೋ: ಕಾನ್ಪುರದ (Kanpur) ಜಾಜ್ಮೌ ಪ್ರದೇಶದಲ್ಲಿ ಬೆಂಕಿ ಹಚ್ಚಿ ಮನೆ ಸುಟ್ಟ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿಗೆ (Irfan Solanki) 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕಾನ್ಪುರದ ಸಂಸದ-ಶಾಸಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಮನೆಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಸೋಲಂಕಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆತನ ಸಹೋದರ ರಿಜ್ವಾನ್ ಸೋಲಂಕಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರಿಗೂ ಶಿಕ್ಷೆ ವಿಧಿಸಲಾಗಿದೆ. 2022ರ ನವೆಂಬರ್‌ನಲ್ಲಿ ಜಾಜ್ಮೌದಲ್ಲಿ ವಿಡಿಪಿಡಬ್ಲ್ಯೂ ಅವರ ಮನೆಗೆ ಬೆಂಕಿ ಹಚ್ಚಿದ ಆರೋಪ ಸಮಾಜವಾದಿ ಪಕ್ಷದ ನಾಯಕರ ಮೇಲಿದೆ. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದ ಅಮಿತ್ ಶಾ
ಕೋರ್ಟ್ ಆದೇಶದಿಂದಾಗಿ ಸೋಲಂಕಿ, ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ. ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾಗುವ ಯಾವುದೇ ಶಾಸಕರು ತಮ್ಮ ಸ್ಥಾನದಿಂದ ಅನರ್ಹರಾಗುತ್ತಾರೆ. ಗಂಭೀರ ಕ್ರಿಮಿನಲ್ ಅಪರಾಧ ಹೊಂದಿರುವ ವ್ಯಕ್ತಿ ಶಾಸಕರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಕಾನೂನು ಹೇಳುತ್ತದೆ. ಪ್ರತಿ ಅಪರಾಧಿಗೆ ಒಟ್ಟು 30,500 ರೂ. ದಂಡವನ್ನು ವಿಧಿಸಲಾಗಿದೆ.
ನಜೀರ್ ಫಾತಿಮಾ ಪರವಾಗಿ ಜಾಜ್ಮೌ ಪೊಲೀಸ್ ಠಾಣೆಯಲ್ಲಿ 2022ರ ನವೆಂಬರ್ 8 ರಂದು ಪ್ರಕರಣ ದಾಖಲಾಗಿತ್ತು. ಶಾಸಕ ಸೇರಿ ಒಟ್ಟು 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ತನ್ನ ಮನೆಯನ್ನು ಎಲ್ಲರೂ ಸುಟ್ಟು ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣವಚನಕ್ಕೆ ಬಿಎಸ್‌ವೈಗೆ ಆಹ್ವಾನ