ಹಾವೇರಿ: ಒಂದು ಹೊಸ ರಸ್ತೆಯನ್ನು ನಿರ್ಮಿಸಬೇಕೆಂದರೆ ರಸ್ತೆ ಬರುವ ದಾರಿಯಲ್ಲಿ ಮರಗಳನ್ನು ಕಡಿಯುವುದು ಅನಿವಾರ್ಯ. ಆದರೆ ನೈರುತ್ಯ ರೈಲ್ವೆ ಇಲಾಖೆಯವರು ಮರಗಳನ್ನು ಕಡಿಯುವುದನ್ನು ತಪ್ಪಿಸಿ ಬೇರೆಡೆಗೆ ಶಿಫ್ಟ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.
ರಸ್ತೆ ನಿರ್ಮಾಣಕ್ಕಾಗಿ ಹಾಗೂ ಕೆಲವು ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳನ್ನ ಕಡಿಯಲಾಗುತ್ತದೆ. ಆದ್ರೆ ನೈರುತ್ಯ ರೈಲ್ವೆ ಇಲಾಖೆ ಇದಕ್ಕೆ ಹೊರತಾಗಿದೆ. ಕಳೆದ ಕೆಲವು ತಿಂಗಳಿನಿಂದ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿಯಿಂದ ಚಿಕ್ಕಜಾಜೂರು ದ್ವಿಪಥ ಮಾರ್ಗ ನಿರ್ಮಿಸುತ್ತಿದೆ. ಇದಕ್ಕಾಗಿ ಮರಗಳನ್ನ ಕಡಿಯೋದು ಅನಿವಾರ್ಯವಾಗಿದೆ. ಆದರೆ ಮಾರ್ಗದ ಮಧ್ಯೆ ಬರುವಂತಹ ಮರಗಳನ್ನು ಬೇರೆಡೆಗೆ ನಾಟಿ ಮಾಡಲಾಗುತ್ತಿದೆ.
Advertisement
ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ರೈಲ್ವೆ ನಿಲ್ದಾಣದಲ್ಲಿದ್ದ ಸುಮಾರು 46 ಬೇವಿನಮರ, ಹೊಂಗೆ ಮರಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈಗಿದ್ದ ಜಾಗದಿಂದ ಕನಿಷ್ಟ 15 ರಿಂದ 20 ಮೀಟರ್ ದೂರದಲ್ಲಿ ಮರಗಳನ್ನ ನಾಟಿ ಮಾಡಲಾಗುತ್ತಿದೆ. ಈಗಾಗಲೇ 25ಕ್ಕೂ ಹೆಚ್ಚು ಮರಗಳನ್ನ ಶಿಫ್ಟ್ ಮಾಡಿದ್ದಾರೆ. ಪರಿಸರ ಉಳಿಸುವ ಉದ್ದೇಶದಿಂದ ಈ ರೀತಿಯ ಕಾರ್ಯ ಮಾಡಲಾಗುತ್ತಿದೆ.
Advertisement
ಹೈದರಾಬಾದ್‍ನ ವಿಶೇಷ ತಂಡ, ತೋಟಗಾರಿಕಾ ಇಲಾಖೆ, ರೈಲ್ವೆ ಎಂಜಿನಿಯರ್ ತಿವಾರಿ ಸೇರಿದಂತೆ 15ಕ್ಕೂ ಹೆಚ್ಚು ಜನ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ರೈಲ್ವೆ ಇಲಾಖೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿರೋದು ನಿಜಕ್ಕೂ ಮೆಚ್ಚುವಂತ ಕಾರ್ಯವಾಗಿದೆ. ಇದನ್ನ ಎಲ್ಲೆಡೆ ಅಳವಡಿಸಿಕೊಂಡರೆ ಮರಗಳನ್ನು ಸಂರಕ್ಷಿಸಬಹುದು ಎಂದು ರೈಲ್ವೆ ಇಲಾಖೆಯ ಈ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.