ಸೋನು ನಿಗಮ್‍ಗೆ ಬಿಗ್ ರಿಲೀಫ್ – ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

Public TV
2 Min Read
sonu nigam 1

ಬೆಂಗಳೂರು: ಕನ್ನಡದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್‌ (Sonu Nigam) ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್‌ (High Court) ಆದೇಶಿಸಿದೆ.

ಬೆಂಗಳೂರಿನ (Bengaluru) ಖಾಸಗಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್‌ಗೆ ಕನ್ನಡ (Kannada) ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೆ ಪಹಲ್ಗಾಮ್ ದಾಳಿ ನಡೆದಿದ್ದು ಎಂದಿದ್ದರು. ಈ ಹೇಳಿಕೆ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ರದ್ದು ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ, ಗಾಯಕನ ವಿರುದ್ಧ ತನಿಖಾಧಿಕಾರಿಗಳು ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದೆ. ಇದ್ನನೂ ಓದಿ: ಕನ್ನಡ.. ಕನ್ನಡ ಇದಕ್ಕೇನೇ ಭಯೋತ್ಪಾದಕ ದಾಳಿ ನಡೆದಿದ್ದು – ವಿವಾದ ಮೈಮೇಲೆಳೆದುಕೊಂಡ ಸೋನು ನಿಗಮ್

COURT

ಅರ್ಜಿ ವಿಚಾರಣೆ ವೇಳೆ, ಸೋನು ನಿಗಮ್‌ಗೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚಿಸಿತು. ಈ ವೇಳೆ ಠಾಣೆಗೆ ಹಾಜರಾಗಲು ವಿನಾಯಿತಿ ನೀಡುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲು ಅನುಮತಿ ನೀಡಿತು.

ಸೋನು ನಿಗಮ್‌ ಹೇಳಿಕೆ ದಾಖಲು ಮಾಡುವುದು ಅನಿವಾರ್ಯವಾದರೆ, ತನಿಖಾಧಿಕಾರಿ ಸೋನು ನಿಗಮ್ ನಿವಾಸಕ್ಕೆ ತೆರಳಲು ಅವಕಾಶವಿದೆ. ಆದರೆ ಈ ಖರ್ಚು ವೆಚ್ಚವನ್ನು ಅರ್ಜಿದಾರರು ಭರಿಸಬೇಕು ಎಂದು ಆದೇಶಿಸಲಾಗಿದೆ.

ಸೋನು ನಿಗಮ್ ಪರ ವಕೀಲ ಧನಂಜಯ್ ವಿದ್ಯಾಪತಿ ವಾದ ಮಂಡಿಸಿದರು. ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕಾಗಿ ಈ ಪ್ರಕರಣ ದಾಖಲಿಸಲಾಗಿದೆ. ಯಾರೋ ಮೂರನೇ ವ್ಯಕ್ತಿ ಕೊಟ್ಟ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಅರ್ಜಿದಾರರು ಕನ್ನಡಕ್ಕೆ ಅವಮಾನ ಮಾಡುವ ಕೃತ್ಯ ಎಸಗಿಲ್ಲ. ಈಗಾಗಲೇ ಕನ್ನಡಿಗರ ಕ್ಷಮೆ ಕೂಡ ಕೇಳಿದ್ದಾರೆ ಎಂದು ವಾದಿಸಿದರು. ಸರ್ಕಾರದ ಪರ ವಕೀಲ ಬಿ.ಎನ್ ಜಗದೀಶ್ ವಾದ ಮಂಡಿಸಿದರು.

ಮೇ 1ರಂದು ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ್ದ. ಈ ವೇಳೆ, ಅವರು, ಕನ್ನಡ ಕನ್ನಡ.. ಇದಕ್ಕೆ ಪಹಲ್ಗಾಮ್‌ ದಾಳಿ ನಡೆದಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

Share This Article