ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದ – ಎಸ್‍ಪಿಜಿಗೆ ಸೋನಿಯಾ ಭಾವನಾತ್ಮಕ ಪತ್ರ

Public TV
2 Min Read
sonia gandhi1

ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ನಂತರ ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಎಸ್‍ಪಿಜಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಎಸ್‍ಪಿಜಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರಿಗೆ ಈ ವಿಚಾರವಾಗಿ ಪತ್ರ ಬರೆದಿರುವ ಸೋನಿಯಾ ಗಾಂಧಿ ಅವರು, ಬಹಳ ಕಾಳಜಿ, ವಿವೇಚನೆಯಿಂದ ನಮ್ಮ ಕುಟುಂಬವನ್ನು 28 ವರ್ಷಗಳ ಕಾಲ ರಕ್ಷಿಸಿದ ಅತ್ಯುತ್ತಮ ಶಕ್ತಿ ಎಸ್‍ಪಿಜಿ ನನ್ನ ಮೆಚ್ಚುಗೆ ಮತ್ತು ಕೃತಜ್ಞತೆಗಳು ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.

sonia

ಕಳೆದ 28 ವರ್ಷಗಳಿಂದ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ್ದ ವಿಶೇಷ ಭದ್ರತಾ ಪಡೆ ಎಸ್‍ಪಿಜಿಯನ್ನು ಶುಕ್ರವಾರ ಹಿಂಪಡೆದಿದೆ. ಅವರಿಗೆ ಸಿಆರ್‍ಪಿಎಫ್ ಝಡ್ ಪ್ಲಸ್ ಭದ್ರತೆಯನ್ನು ನೀಡಲಾದೆ. ಹೀಗಾಗಿ ಸೋನಿಯಾ ಅವರು ಎಸ್‍ಪಿಜಿ ಮಹೋನ್ನತ ಶಕ್ತಿಯಾಗಿದ್ದು, ಅದರ ಸದಸ್ಯರು ಅವರಿಗೆ ನಿಯೋಜಿಸಲಾದ ಪ್ರತಿಯೊಂದು ಕಾರ್ಯದಲ್ಲೂ ಧೈರ್ಯ ಮತ್ತು ದೇಶಪ್ರೇಮವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 28 ವರ್ಷಗಳಿಂದ ಎಸ್‍ಪಿಜಿ ಭದ್ರತೆಯಲ್ಲಿ ನಾನು ಮತ್ತು ನನ್ನ ಕುಟುಂಬ ಉತ್ತಮ ಭದ್ರತೆಯಲ್ಲಿ ಇದ್ದೇವೆ ಎಂದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಅನುಭವಿಸಿದ್ದೇವೆ. ಎಸ್‍ಪಿಜಿಯ ವೃತ್ತಿಪರತೆ, ಕಾರ್ಯಧಕ್ಷತೆ, ಅವರ ಪ್ರಮಾಣಿಕತೆಯನ್ನು ನಾನು ಶ್ಲಾಘಿಸುತ್ತೇನೆ. ಇಷ್ಟು ದಿನ ನನ್ನ ಇಡೀ ಕುಟುಂಬದ ರಕ್ಷಣೆ ಮತ್ತು ಯೋಗಕ್ಷೇಮವನ್ನು ನೋಡಿಕೊಂಡ ಎಸ್‍ಪಿಜಿಗೆ ನನ್ನ ಧನ್ಯವಾದಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮುನ್ನಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಎಸ್‍ಪಿಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಕಳೆದ 28 ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ. ಅಲ್ಲದೆ ನಿಮ್ಮ ನಿರಂತರ ಬೆಂಬಲ ಹಾಗೂ ವಾತ್ಸಲ್ಯದಿಂದ ತುಂಬಿದ್ದ ಪ್ರಯಾಣಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಬರೆದುಕೊಂಡಿದ್ದರು.

ಗಾಂಧಿ ಕುಟುಂಬಕ್ಕೆ ಭದ್ರತೆಯನ್ನು ವಾಪಸ್ ಪಡೆದಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿಗಳದ್ದೂ ಜೀವವೇ, ಸೋನಿಯಾ ಗಾಂಧಿ ಕುಟುಂಬದವರದ್ದು ಜೀವವೇ. ಕೇಂದ್ರ ಸರ್ಕಾರ ಬೇರೆಯವರಿಗೆ ನೀಡಿದ್ದ ಭದ್ರತೆ ಹಿಂಪಡೆಯಲು ಕಾರಣವೇನು? ಈ ಕೂಡಲೇ ಅವರಿಗೆ ಎಸ್‍ಪಿಜಿ ಭದ್ರತೆ ನೀಡಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

ಪ್ರಸ್ತುತ ಎಸ್‍ಪಿಜಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬೆದರಿಕೆ ಕರೆಗಳನ್ನು ಆಧರಿಸಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ಈ ಭದ್ರತೆಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಎಸ್‍ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ 10 ವರ್ಷಗಳ ಕಾಲ ಭದ್ರತೆ ನೀಡುವಂತೆ ನಿಯಮ ರೂಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *