ಮೈಸೂರು: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಆದರೆ ಇಲ್ಲೊಬ್ಬ ಯುವಕ ತನ್ನ ತಂದೆಗಾಗಿ ಲಿವರ್ ದಾನ ಮಾಡುತ್ತಿದ್ದು, ಆದರ್ಶ ಮಗನಾಗಿದ್ದಾರೆ.
ಮೈಸೂರಿನ ವೀರನಗರ ನಿವಾಸಿಯಾಗಿರುವ ಪ್ರೀತೇಶ್ ಜೈನ್ ತನ್ನ ಅಪ್ಪನಿಗೆ ಲಿವರ್ ದಾನ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಲಿವರ್ ದಾನಕ್ಕೆ ತನ್ನ ದೇಹದ ತೂಕ ಅಡ್ಡಿ ಆಗಿತ್ತು. ಹೀಗಾಗಿ ಸದ್ಯ ದೇಹದ ತೂಕ ಇಳಿಸುತ್ತಿದ್ದಾರೆ. ಪ್ರೀತೇಶ್ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಯಾಗಿದ್ದು, ತಂದೆ ಅಶೋಕ್ ಜೈನ್ ಅವರು ಕಳೆದ ಎಂಟು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಎಷ್ಟೆ ಚಿಕಿತ್ಸೆ ಪಡೆದರು ಗುಣಮುಖವಾಗಲಿಲ್ಲ.
ಕೊನೆಗೆ ವೈದ್ಯರು ತಂದೆ ಅಶೋಕ್ ಜೈನ್ ಅವರ ಯಕೃತ್ ಅನ್ನು ಸಂಪೂರ್ಣವಾಗಿ ತೆಗೆದು ಹೊಸ ಲಿವರ್ ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೊಸ ಲಿವರ್ ನೀಡುವ ದಾನಿಗಳು ರಕ್ತ ಸಂಬಂಧಿಗಳು ಆದರೆ ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ. ಈ ಕಾರಣಕ್ಕೆ ಮಗ ಪ್ರೀತೇಶ್ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ತಮ್ಮ ಲಿವರ್ ದಾನ ಮಾಡಲು ಮುಂದಾಗಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಲಿವರ್ ದಾನ ಮಾಡಲು ಮುಂದಾದ ನನಗೆ ದೇಹದ ತೂಕ ಅಡ್ಡಿಯಾಗಿದೆ. ತಾವು 90 ಕೆ.ಜಿ. ತೂಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದೇಹದ ತೂಕವನ್ನ 70 ರಿಂದ 75 ಕೆ.ಜಿ.ತೂಕಕ್ಕೆ ಇಳಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಈಗ ನಾನು ಪ್ರತಿದಿನ ದೇಹ ದಂಡಿಸುತ್ತಿದ್ದು, ದಿನದ ವ್ಯಾಯಾಮದ ಜೊತೆ ಪ್ರತಿದಿನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸೈಕಲ್ ತುಳಿಯುತ್ತಿದ್ದೇನೆ. ಈಗಾಗಲೇ ಕಳೆದ 27 ದಿನಗಳಿಂದ ದೇಹ ದಂಡಿಸುತ್ತಿದ್ದು, 7 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದೇನೆ ಎಂದು ಪ್ರೀತೇಶ್ ಹೇಳಿದ್ದಾರೆ.
ತನ್ನ ತಂದೆಯ ಜೀವ ಉಳಿಸಿಕೊಳ್ಳಲು ಮಗನು ಮಾಡುತ್ತಿರುವ ಕಸರತ್ತು ನಿಜಕ್ಕು ಎಲ್ಲರು ಮೆಚ್ಚುವಂತಹದ್ದಾಗಿದೆ. ಒಂದು ತಿಂಗಳ ಅವದಿಯಲ್ಲಿ 10 ಕೆ.ಜಿ. ತೂಕ ಇಳಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ.