ಬೆಂಗಳೂರು: ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯ ಕೊರಳಿಗೆ ಮಚ್ಚು ಇಟ್ಟು ಕೊಲೆ ಮಾಡಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಿವಕುಮಾರ್ ತನ್ನ 76 ವರ್ಷದ ತಾಯಿ ಸರಸ್ವತಮ್ಮನನ್ನೇ ಕೊಲೆ ಮಾಡಲು ಮುಂದಾಗಿದ್ದಾನೆ. ಸರಸ್ವತಮ್ಮ ಮಂಡ್ಯ ನಿವಾಸಿಯಾಗಿದ್ದು, ಪತಿಯ ಸಾವಿನ ಬಳಿಕ ಕಿರಿಯ ಮಗನ ಜೊತೆ ವಾಸವಿದ್ದರು. ಮೊದ ಮೊದಲು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡಿ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿ ತಾಯಿಯ ಹೆಸರಿಗಿದ್ದ ಒಂದು ಕೋಟಿ ಆಸ್ತಿಯನ್ನ ತನ್ನ ಹೆಸರಿಗೆ ವರ್ಗಾಯಿಸಿದ್ದಾನೆ.
ಇಷ್ಟಕ್ಕೆ ತೃಪ್ತಿಯಾಗದ ಪಾಪಿ ಮಗ, ತಾಯಿಯ ಕುತ್ತಿಗೆಯಲ್ಲಿರುವ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ. ಇದಕ್ಕೆ ವಿರೋಧಿಸಿದಾಗ ಕುತ್ತಿಗೆಯ ಮೇಲೆ ಮಚ್ಚು ಇಟ್ಟು ಹೆದರಿಸಿ ಕಿತ್ತುಕೊಂಡಿದ್ದಾನೆ. ರಾತ್ರಿ ವೇಳೆ ಕುಡಿದು ಮನೆಗೆ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಮನೆಯಿಂದ ಹೆತ್ತತಾಯಿಯನ್ನೇ ಹೊರಹಾಕಿದ್ದಾನೆ. ಮಗನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ, ಇದೀಗ ವೃದ್ಧೆ ತಾಯಿ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಬಂದಿದ್ದಾರೆ.
ಸರಸ್ವತಮ್ಮನಿಗೆ ಚಿತ್ರಹಿಂಸೆ ಕೊಡುವ ವಿಷಯ ಪಕ್ಕದ ಮನೆಯವರ ಮೂಲಕ ಬೆಂಗಳೂರಿನಲ್ಲಿರುವ ಮಗಳು ಶೋಭಾಗೆ ತಿಳಿದಿದೆ. ನೀರು ಇಲ್ಲದೆ ಸಾಯುವ ಸ್ಥಿತಿಯಲ್ಲಿದ್ದ ವೃದ್ಧ ತಾಯಿಯನ್ನು ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿಗೆ ಹಿಂಸೆ ಕೊಟ್ಟ ತನ್ನ ಸಹೋದರನ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ಕ್ಯಾರೆ ಅಂತಿಲ್ಲ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸರು ಮಾತ್ರ ನಮಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ.
ಮಗ ಶಿವಕುಮಾರ್, ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ, ಮನೆಯಿಂದ ಹೊರ ಹಾಕಿ ದುಬಾರಿ ಕಾರಿನಲ್ಲಿ ಗೋವಾ, ಮಹಾರಾಷ್ಟ್ರ ಎಂದು ಸುತ್ತಾಡುತ್ತಿದ್ದಾನೆ.