-ಮಗನಿಗೆ ವಿನಾಯ್ತಿ ಪಾಸ್ ಸಹ ನೀಡದ ಅಧಿಕಾರಿಗಳು
ಯಾದಗಿರಿ: ತಾಯಿ ಶವ ಸ್ವಗ್ರಾಮಕ್ಕೆ ತರಲು ಅನುಮತಿ ಸಿಗದಕ್ಕೆ ಪುತ್ರನೋರ್ವ ಯಾದಗಿರಿ ಅಪರ ಜಿಲ್ಲಾಧಿಕಾರಿ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಜಿಲ್ಲೆಯ ಬಾಡಿಹಾಳ ಗ್ರಾಮದ ನಿವಾಸಿಯಾಗಿದ್ದ ರುದ್ರಮ್ಮ ಕೆಲವು ದಿನಗಳ ಹಿಂದೆ ತವರೂರಾದ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗಿ ಗ್ರಾಮಕ್ಕೆ ತೆರಳಿದ್ದರು. ಕೊರೊನಾ ತಡೆಗಾಗಿ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ರುದ್ರಮ್ಮ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರು. ಆದ್ರೆ ಇಂದು ರುದ್ರಮ್ಮ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಸಾವಿನ ವಿಷಯ ತಿಳಿದ ರುದ್ರಮ್ಮ ಅವರ ವಿಕಲಚೇತನ ಮಗ ಮಲ್ಲಿಕಾರ್ಜುನ್ ಅಮ್ಮನ ಮೃತದೇಹವನ್ನು ಬಾಡಿಹಾಳ ಗ್ರಾಮಕ್ಕೆ ತರಲು ನಿರ್ಧರಿಸಿದ್ದರು. ಆದ್ರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಶವ ತರಲು ಅನುಮತಿ ನೀಡಿಲ್ಲ. ಅನುಮತಿ ನಿಡುವಂತೆ ಮಲ್ಲಿಕಾರ್ಜುನ್ ಅಧಿಕಾರಿಗಳ ಮುಂದೆ ಅಳುತ್ತಿರುವ ದೃಶ್ಯ ಕಲ್ಲು ಹೃದಯದಲ್ಲಿ ಕಣ್ಣೀರು ಬರುವಂತೆ ಮಾಡಿತ್ತು. ಇದನ್ನೂ ಓದಿ: ಲಾಕ್‍ಡೌನ್‍ನಿಂದ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಮಗ
ಅಧಿಕಾರಿಗಳು ಮಲ್ಲಿಕಾರ್ಜುನ್ ಗೂ ತೆರಳಲು ಯಾವುದೇ ವಿನಾಯ್ತಿ ಪಾಸ್ ನೀಡಿಲ್ಲ. ಕಚೇರಿಯಿಂದ ಅಳುತ್ತಾ ಹೊರ ಬಂದ ಮಲ್ಲಿಕಾರ್ಜುನ್ ಖಾಸಗಿ ವಾಹನದ ವ್ಯವಸ್ಥೆ ಮಾಡಿಕೊಂಡು ಕೊನೆಯ ಬಾರಿ ಅಮ್ಮನನ್ನು ಕಾಣುವದಕ್ಕಾಗಿ ಹೊರಟಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಮಗನ ಬರುವಿಕೆಗಾಗಿ ಗ್ರಾಮಸ್ಥರು ಕಾಯುತ್ತಿದ್ದು, ನಾಳೆ ರುದ್ರಮ್ಮನವರ ಅಂತ್ಯಕ್ರಿಯೆ ನಡೆಯಲಿದೆ.