ಹಾಸನ: ತಾಯಿ ಸಾವಿನಿಂದ ಆಘಾತಗೊಂಡ ಮಗ ಹೆತ್ತವಳ ಅಂತ್ಯಕ್ರಿಯೆ ವೇಳೆ ತಾನು ಸಾವನ್ನಪ್ಪಿರೋ ಮನಕಲಕುವ ಘಟನೆ ಜಿಲ್ಲೆಯ ಬೇಲೂರು ತಾಲೂಕು ಬಕ್ರವಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾಲಮ್ಮ(70) ಮತ್ತು ಮಂಜು(48) ಸಾವಿನಲ್ಲೂ ಒಂದಾದ ತಾಯಿ-ಮಗ. ಮಂಜು ಅರೇಹಳ್ಳಿ ಹೋಬಳಿ ಕಿತ್ತಾವರ ಗ್ರಾಮದಲ್ಲಿ ಇದ್ದರೆ ತಾಯಿ ಪಾಲಮ್ಮ ಬಕ್ರವಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮಂಜು ಅವರಿಗೆ ತಾಯಿ ಅಂದ್ರೆ ಹೆಚ್ಚು ಪ್ರೀತಿ. ಆದ್ರೆ ದುರದೃಷ್ಟವಶಾತ್ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜನವರಿ 4ರಂದು ಮೃತಪಟ್ಟಿದ್ದರು. ತಾಯಿ ಸಾವಿನಿಂದ ಮಂಜು ಅವರು ಬಹಳ ನೊಂದುಕೊಂಡಿದ್ದರು. ಹೆತ್ತವಳ ಅಂತ್ಯಸಂಸ್ಕಾರ ಮಾಡಲು ಬಂದ ವೇಳೆ ಮಂಜು ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಶನಿವಾರ ತಾಯಿಯ ಅಂತ್ಯಕ್ರಿಯೆ ನಡೆಸುವ ವೇಳೆ ಈ ಮನಕಲಕುವ ಘಟನೆ ಸಂಭವಿಸಿದೆ. ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಮಗನೂ ತಾಯಿಯೊಟ್ಟಿಗೆ ಇಹಲೋಕ ತ್ಯಜಿಸಿರುವುದು ಕುಟುಂಬಸ್ಥರಲ್ಲಿ ಅತೀವ ನೋವು ಉಂಟು ಮಾಡಿದೆ. ಕೊನೆಗೆ ಸಾವಿನಲ್ಲೂ ಒಂದಾದ ತಾಯಿ-ಮಗನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಹಾಗೂ ಸಂಬಂಧಿಕರು ಒಂದೇ ಕಡೆಯಲ್ಲಿ ನೆರವೇರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv