ಬೆಂಗಳೂರು: ಬಿಜೆಪಿಯಲ್ಲಿ ಕೆಲವರು ಅಯೋಗ್ಯರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಅವರಿಗೆ ವೋಟ್ ಹಾಕಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದ ತೇಜಸ್ವಿನಿ ಅನಂತ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಶಾಸಕರು, ಅನೇಕ ಕ್ಷೇತ್ರಗಳಲ್ಲಿ ಬಿಜೆಪಿಯ ಅಯೋಗ್ಯ ಅಭ್ಯರ್ಥಿಗಳಿದ್ದಾರೆ. ಮತದಾರರು ಅವರನ್ನು ನೋಡಿ ಮತ ಹಾಕುವುದಿಲ್ಲ. ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕುತ್ತಾರೆ ಎನ್ನುವ ಸತ್ಯವನ್ನು ನಾನು ಒಪ್ಪಿಕೊಳ್ಳಲೇಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದರು. ಈ ಇಬ್ಬರು ನಾಯಕರ ನೇತೃತ್ವದಲ್ಲಿಯೇ ಅನೇಕರು ಶಾಸಕರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಆಯ್ಕೆಯಾದರು. ಬಿಜೆಪಿಗೆ ಅನಂತ್‍ಕುಮಾರ್ ಅವರ ಕೊಡುಗೆ ಅಪಾರ. ಹೀಗಾಗಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಒಂದು ಅವಕಾಶ ನೀಡಬೇಕಿತ್ತು ಎಂದರು.
ತೇಜಸ್ವಿನಿ ಅನಂತ್‍ಕುಮಾರ್ ಅವರು ಪಕ್ಷದ ಟಿಕೆಟ್ ಆಕಾಂಕ್ಷಿಯಾಗರಲಿಲ್ಲ. ಪಕ್ಷದ ಮುಖಂಡರು ಅವರ ಮನೆಗೆ ಹೋಗಿ ಟಿಕೆಟ್ ನೀಡುವ ಭರವಸೆ ನೀಡಿದರು. ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿಸಿದ್ದು ಬಿಜೆಪಿಯ ಅನೇಕ ಕಾರ್ಯಕರ್ತರಿಗೆ ನೋವು ತಂದಿದೆ. ಕೆಲವರು ಟಿಕೆಟ್ ತಪ್ಪಿಸಿ ರಾಜ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ಅದು ಅವರಿಂದ ಸಾಧ್ಯವಿಲ್ಲ. ಈಗ ಅವರು ಸಂತೋಷವಾಗಿದ್ದರೂ, ಅಸಂತೋಷವಾಗುವ ದಿನಗಳು ದೂರ ಉಳಿದಿಲ್ಲ ಎಂದು ಹೇಳಿದರು.