ಹಾಸನ: ರಸ್ತೆ ವಿಚಾರಕ್ಕೆ ಸೈನಿಕ ಹಾಗೂ ಅವರ ಪತ್ನಿಯ ಮೇಲೆ ಮಾಜಿ ಸೈನಿಕ ಹಾಗೂ ಆತನ ಕುಟುಂಬಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ (Hassan) ನಗರದ ಬಿ.ಟಿ.ಕೊಪ್ಪಲಿನಲ್ಲಿ ನಡೆದಿದೆ.
ಹೆಚ್.ಆರ್.ರಮೇಶ್, ಮೋಹನ್‌ಕುಮಾರಿ ಹಲ್ಲೆಗೊಳಗಾದವರು. ಕಿರಣ್, ಚರಣ್, ಭಾಗ್ಯಮ್ಮ ಹಾಗೂ ಆಕೆಯ ಪುತ್ರಿ ಹಲ್ಲೆ ನಡೆಸಿದ ಆರೋಪಿಗಳು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ 430ನೇ ಜನ್ಮದಿನ ಸಂಭ್ರಮ – ನೂರಾರು ಕಲಾವಿದರಿಂದ ನಾದಹಾರ ಸೇವೆ
ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ರಮೇಶ್ ಅವರು ರಜೆ ಮೇಲೆ ಹಾಸನದ ತಮ್ಮ ನಿವಾಸಕ್ಕೆ ಬಂದಿದ್ದರು. ರಮೇಶ್ ಎದುರು ಮನೆಯಲ್ಲಿ ಕಿರಣ್ ಹಾಗೂ ಆತನ ಕುಟುಂಬಸ್ಥರು ವಾಸವಿದ್ದರು. ಕಿರಣ್ ಮನೆಯವರು ಸಾರ್ವಜನಿಕರು ಓಡಾಡಲು ಇರುವ 30 ಅಡಿ ರಸ್ತೆಯಲ್ಲಿ, 10 ಅಡಿಯಷ್ಟು ಜಾಗಕ್ಕೆ ಕಲ್ಲುಗಳನ್ನು ಇಟ್ಟು ಗಿಡಗಳನ್ನು ಹಾಕಿದ್ದರು. ಇದರಿಂದಾಗಿ ವಾಹನಗಳು ಓಡಾಡಲು ತೊಂದರೆಯಾಗುತ್ತಿದೆ ಎಂದು ರಮೇಶ್ ಪ್ರಶ್ನಿಸಿದ್ದರು. ಇದನ್ನೂ ಓದಿ: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ವಿವಾದ: ನ್ಯಾಯ ನನ್ನ ಪರ ಇದೆ ಎಂದ ರಮ್ಯಾ
ಇದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಬುಧವಾರ ರಾತ್ರಿ ರಮೇಶ್, ಪತ್ನಿ ಹಾಗೂ ಮಕ್ಕಳೊಂದಿಗೆ ಕಾರಿನಲ್ಲಿ ಬರುವಾಗ ಅಡ್ಡಗಟ್ಟಿದ ಭಾಗ್ಯಮ್ಮ, ಚರಣ್, ಕಿರಣ್ ಹಲ್ಲೆ ನಡೆಸಿದ್ದರು. ನಂತರ ಮನೆಯ ಬಳಿ ಬಂದ ನಾಲ್ವರು ಚಾಕುವಿನಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿರುವ ರಮೇಶ್ ಹಾಗೂ ಅವರ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮದ ಕುರಿತ ಹೇಳಿಕೆ – ಉದಯನಿಧಿ ಸ್ಟಾಲಿನ್ ವಿರುದ್ಧ ಕೋರ್ಟ್ ಅನುಮತಿಯಿಲ್ಲದೇ ದೂರು ದಾಖಲಿಸುವಂತಿಲ್ಲ: ಸುಪ್ರೀಂ
ಆರೋಪಿಗಳು ರಮೇಶ್ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.