ಚಿಕ್ಕಮಗಳೂರು: ಭಯೋತ್ಪಾದಕರ ದಾಳಿಯಲ್ಲಿ ಸೊಂಟಕ್ಕೆ ಗಾಯವಾಗಿ, ಎಡಗೈಗೆ 40ಕ್ಕೂ ಹೆಚ್ಚು ಹೊಲಿಗೆ ಹಾಕಿಸಿಕೊಂಡು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ತಿಂಗಳವರೆಗೆ ಮನೆಯವರಿಗೆ ವಿಷಯವನ್ನ ಹೇಳದೆ ಬೆಡ್ ಮೇಲೆ ಮಲಗಿಕೊಂಡೇ ಚೆನ್ನಾಗಿದ್ದೇನೆ ಅಂತ ಹೇಳುವ ಮೂಲಕ ಮಲೆನಾಡಿನ ವೀರಯೋಧರೊಬ್ಬರು ತಾಯಿ ಹಾಗೂ ತಾಯ್ನಾಡಿನ ಪ್ರೀತಿ ಮೆರೆದಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಸಿಗದಾಳು ಗ್ರಾಮದ ಆದರ್ಶ್ ತಾಯಿ ಮತ್ತು ತಾಯ್ನಾಡಿನ ಪ್ರೀತಿ ಮೆರೆದಿರುವ ಬಿ.ಎಸ್.ಎಫ್ ಯೋಧ. ಇವರು ಜಮ್ಮು-ಕಾಶ್ಮೀರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಣರಾಜ್ಯೋತ್ಸವಕ್ಕೆ ವಾರದ ಹಿಂದೆ ಜಮ್ಮುವಿನ ಸಾಂಬಾ ಜಿಲ್ಲೆಯ ಹತ್ತು ಕಿ.ಮೀ. ದೂರದ ರಾಜ್‍ಘಡ್‍ನಲ್ಲಿ ಬೀಡುಬಿಟ್ಟಿದ್ದರು.
ಈ ವೇಳೆ ಸೀಮಾ ಗಡಿ ಉಲ್ಲಂಘನೆ ಮಾಡಿ ದಾಳಿ ಮಾಡಿದ್ದರು. 15 ಭಾರತೀಯ ಯೋಧರ ತಂಡವೂ ಪ್ರತಿದಾಳಿ ಮಾಡಿತ್ತು. ಉಗ್ರರ ಶೆಲ್ ದಾಳಿಯಿಂದ ಆದರ್ಶ್ ಕೈ ಹಾಗೂ ಸೊಂಟಕ್ಕೆ ಗಾಯವಾಗಿತ್ತು. ಉಗ್ರರ ಜೊತೆ ದಾಳಿಗೂ ಮುಂಚೆ ಪತ್ನಿ ಜೊತೆ ಆದರ್ಶ್ ಮಾತನಾಡಿದ್ದರು. ಆಗ ಪತ್ನಿಗೆ ರಾಜಕಾರಣಿಗಳು ಪ್ರಚಾರಕ್ಕೆ ಬಂದಿದ್ದರು ಎಂದು ಹೇಳಿದ್ದು, ದಾಳಿಯ ವಿಚಾರವನ್ನ ಪತ್ನಿಗೆ ಆದರ್ಶ್ ಅವರು ಹೇಳಿರಲಿಲ್ಲ. ಮನೆಗೆ ಹೇಳಿದರೆ ಗಾಬರಿಯಾಗುತ್ತಾರೆ ಎಂದು ಈ ವಿಚಾರದ ಬಗ್ಗೆ ಅವರು ಮನೆಯಲ್ಲಿ ಹೇಳಲಿಲ್ಲ.
ಇದೀಗ ಮನೆಯಲ್ಲಿ ಚಿಕಿತ್ಸೆ ಹಾಗೂ ವಿಶ್ರಾಂತಿಯಲ್ಲಿರುವ ಯೋಧ ಆದರ್ಶ್ ದಾಳಿಯನ್ನ ನೆನೆಯುತ್ತಿದ್ದು, ಗಡಿ, ಸೈನಿಕ ವೃತ್ತಿ, ಹೋರಾಟ ಹೇಗಿರುತ್ತದೆಂದು ಸುತ್ತಮುತ್ತಲಿನವರಿಗೆ ಹೇಳುತ್ತಿದ್ದಾರೆ. ಜೊತೆಗೆ ನನಗೂ ತಾಯಿಗಿಂತ ತಾಯ್ನಾಡೆ ಮುಖ್ಯ ಅಂತಿದ್ದಾರೆ. 2000 ಇಸವಿಯಲ್ಲಿ ಸೇನೆಗೆ ಸೇರಿದ್ದ ಆದರ್ಶ್, 2010ರಲ್ಲಿ ಕಮಾಂಡರ್ ಆಗಿ ವಿಶೇಷ ತರಬೇತಿ ಪಡೆದಿದ್ದರು.
ನಾನು ಪಡೆದ ತರಬೇತಿಯೇ ಉಗ್ರರ ಜೊತೆ ಹೋರಾಡುವುದಕ್ಕೆ ಉತ್ತೇಜನ ನೀಡಿತ್ತು ಎಂದು ಆದರ್ಶ್ ಹೇಳಿದ್ದಾರೆ. ಆದರೆ ಉಗ್ರರೊಂದಿಗೆ ಸೆಣಸಾಟದಲ್ಲಿ ಸ್ನೇಹಿತ ಹಾಗೂ ಸೈನಿಕ ಕೇರಳದ ಸುರೇಶ್ ಸಾವನ್ನಪ್ಪಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv