ಬೆಳಗಾವಿ: ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯ ಜೊತೆಗೆ ಜಗಳವಾಡಿ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಬಿಎಸ್‍ಎಫ್ ಯೋಧ ಬಸವರಾಜ್ ಉರ್ಫ್ ರಫೀಕ್ ಮುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಕಾರಣವೇನು?: ಬಸವರಾಜ್ ಅವರ ತಾಯಿ ಮೂಲತಃ ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದು, ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದ್ರೆ ಪತಿ ಸದ್ಯಪ್ಪ ಸಾವಿನ ನಂತರ ತಾಯಿ ಶಾಂತವ್ವ ಮತ್ತೆ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ಶಹಜಾನ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಶಹಜಾನ್ ಮಗ ಬಿಎಸ್‍ಎಫ್ ಯೋಧ ಬಸವರಾಜ್ ಕೂಡ ಮುಸ್ಲಿಂ ಯುವತಿಯನ್ನು ಮದುವೆಯಾಗಿ ತನ್ನ ಹೆಸರನ್ನು ಬಸವರಾಜ್ ಬದಲಾಗಿ ರಫೀಕ್ ಮುಲ್ಲಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಆದ್ರೆ ಈ ಬದಲಾವಣೆ ವಿಚಾರದಲ್ಲಿ ಪತ್ನಿ ಹಾಗೂ ತಾಯಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು.
Advertisement
ಇತ್ತೀಚೆಗಷ್ಟೇ ಜಮ್ಮುವಿನ ಪೂಂಚ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿದ್ದ ಯೋಧ ಬಸವರಾಜ್ ಅವರು ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಸೋಮವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿದ ಸೈನಿಕ ಮನನೊಂದು ಮನೆ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೆ ಯೋಧ ಬಸವರಾಜ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
Advertisement
ಬಸವರಾಜ್ ಅವರು ಪತ್ನಿ ಬಶೀರಾ ಹಾಗೂ ಅಯಾನ್, ಹಸನ್ ಸಾಬ್ ಎಂಬ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಿಎಸ್‍ಎಫ್ ಕಾರ್ಯಾಲಯದ ಅನುಮತಿ ಸಿಕ್ಕ ನಂತರ ಶವ ಪರೀಕ್ಷೆ ನಡೆಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.