ಚಿಕ್ಕಬಳ್ಳಾಪುರ: ಶತಮಾನದ ಕೇತುಗ್ರಸ್ಥ ಸೂರ್ಯಗ್ರಹಣದಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರೀ ಹೊಡೆತ ಬಿದ್ದಿದೆ. ನಿರೀಕ್ಷಿತ ಪ್ರಮಾಣದ ಪ್ರಯಾಣಿಕರಿಲ್ಲದೆ ಈ ದಿನದ ಕಲೆಕ್ಷನ್‍ನಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬಾರದ ಕಾರಣ ಬಸ್‍ಗಳೆಲ್ಲವೂ ಬೆರಳಣಿಕೆ ಪ್ರಯಾಣಿಕರನ್ನು ಹೊತ್ತು ಸಾಗುವಂತಾಗಿದೆ. ಚಿಕ್ಕಬಳ್ಳಾಪುರ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಗ್ರಹಣದ ಎಫೆಕ್ಟ್ ನಿಂದ ಬಿಕೋ ಎನ್ನುವಂತಿತ್ತು. ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದ್ದ ಬಸ್ ಗಳು ನಿಂತಲ್ಲೇ ನಿಂತ ದೃಶ್ಯಗಳು ಸಾಮಾನ್ಯವಾಗಿತ್ತು. ಇಷ್ಟು ದಿನ ಬಸ್ ಗಳಿಗಾಗಿ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ಇರುತ್ತಿತ್ತು. ಆದರೆ ಇಂದು ಬಸ್ ಚಾಲಕ, ನಿರ್ವಾಹಕರು ಪ್ರಯಾಣಿಕರಿಗಾಗಿ ಕಾಯುವಂತಾಗಿತ್ತು.
Advertisement
Advertisement
ಸಾಮಾನ್ಯ ದಿನಗಳಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ 10 ರಿಂದ 15 ನಿಮಿಷಕ್ಕೆ ಒಂದು ಬಸ್ ಪ್ರಯಾಣಿಕರನ್ನು ಹೊತ್ತ ಬಸ್ ಸಾಗುತ್ತಿತ್ತು. ಆದರೆ ಇಂದು ಅರ್ಧ ಗಂಟೆಯಾದರು ಒಂದು ಬಸ್ ಕೂಡ ತುಂಬಿರಲಿಲ್ಲ. ಪರಿಣಾಮ ಟಿಕೆಟ್ ಕಲೆಕ್ಷನ್‍ನಲ್ಲೂ ಸಹ ಸಾಕಷ್ಟು ಕಡಿಮೆಯಾಗಿದೆ. ಗ್ರಹಣದ ಸಮಯದಲ್ಲಿ 8 ರಿಂದ 11:30ರ ವೇಳೆಗೆ ಸುಮಾರು 45 ಬಸ್ ಗಳು ಬೆಂಗಳೂರು ಕಡೆಗೆ ಸಾಗಬೇಕಿತ್ತು. ಆದರೆ ಎಲ್ಲಾ ಬಸ್ ಗಳು ಅರ್ಧ ಗಂಟೆ ಲೇಟಾಗಿ ಖಾಲಿ ಖಾಲಿಯಾಗಿ ಬೆರಳಣೆಕೆ ಪ್ರಯಾಣಿಕರನ್ನ ಹೊತ್ತು ರಾಜಧಾನಿಯತ್ತ ಸಾಗಿವೆ. ಇದರಿಂದ ಸಹಜವಾಗಿ ಕಲೆಕ್ಷನ್ ಸಾಕಷ್ಟು ಕಡಿಮೆ ಆಗಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಟಿಸಿ ಬಿ.ಸೊಣ್ಣಪ್ಪ ಪಬ್ಲಿಕ್ ಟಿ ವಿಗೆ ಮಾಹಿತಿ ನೀಡಿದರು.
Advertisement
Advertisement
ಖಾಸಗಿ ಬಸ್‍ಗಳಿಗೂ ಎಫೆಕ್ಟ್: ಕೆಎಸ್‍ಆರ್ ಟಿಸಿ ಬಸ್ ಗಳ ಒಂದೆಡೆಯಾದರೆ ಖಾಸಗಿ ಬಸ್ ಗಳ ವ್ಯಥೆಯೂ ಸಾಕಷ್ಟಿದೆ. ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದಲ್ಲೂ ಪ್ರಯಾಣಿಕರಿಲ್ಲದೆ ಬಸ್ ಗಳೆಲ್ಲವೂ ಖಾಲಿ ಖಾಲಿಯಾಗಿ ನಿಂತಿತ್ತು. ಬೆಂಗಳೂರು ಕಡೆಗೆ ಎರಡು ಟ್ರಿಪ್ ಹೊಡೆದರೂ ಪ್ರಯಾಣಿಕರು ಬರುತ್ತಿಲ್ಲ. ಬೆರಳೆಣಿಕೆ ಪ್ರಯಾಣಿಕರು ಮಾತ್ರ ಬಸ್ ಹತ್ತಲು ಬರುತ್ತಿದ್ದಾರೆ. ಕನಿಷ್ಠ ಡಿಸೇಲ್‍ಗೂ ಸಹ ಕಲೆಕ್ಷಕನ್ ಆಗುತ್ತಿಲ್ಲ ಎಂದು ಖಾಸಗಿ ಬಸ್ ಚಾಲಕ ಪಬ್ಲಿಕ್ ಟಿವಿ ಬಳಿ ಅಳಲು ತೋಡಿಕೊಂಡರು.
ಒಂದೆಡೆ ವಾಹನಗಳ ಸಂಚಾರ ವಿರಳವಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದರೆ, ಮತ್ತೊಂದೆಡೆ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ವ್ಯಾಪಾರ ವಹಿವಾಟು ಇಲ್ಲದೆ ವ್ಯಾಪಾರಸ್ಥರು ನಿರಾಸೆ ಅನುಭವಿಸಿದರು.