ಬೆಂಗಳೂರು : ಇವತ್ತು ಕಂಕಣ ಸೂರ್ಯ ಗ್ರಹಣ. ವೈಜ್ಞಾನಿಕ ಹಿನ್ನೆಲೆ ಈ ಗ್ರಹಣ ಯಾವುದೇ ಆತಂಕ ತರೋದಿಲ್ಲ. ಆದ್ರೆ ಆಚಾರ-ವಿಚಾರ, ರಾಶಿ- ಗೋತ್ರ-ಫಲ, ದೇವರು ಅಂತ ನಂಬೋರಿಗೆ ಈ ಗ್ರಹಣ ಸಿಕ್ಕಾಪಟ್ಟೆ ಭಯ ಹುಟ್ಟಿಸಿದೆ. ಈ ಭಯ ರಾಜ್ಯದ ದೊರೆ ಸಿಎಂ ಯಡಿಯೂರಪ್ಪಗೂ ಬಿಟ್ಟಿಲ್ಲ. ಗ್ರಹಣಕ್ಕೆ ಒಂದು ರೀತಿ ಹೆದರಿಕೊಂಡಿರೋ ಸಿಎಂ ಯಡಿಯೂರಪ್ಪ ಇವತ್ತು ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಮಧ್ಯಾಹ್ನದ ನಂತರ ಇಟ್ಟುಕೊಂಡಿದ್ದಾರೆ. ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗೆ ಬಾರದೆ ಮನೆಯಲ್ಲಿ ಇದ್ದಾರೆ. ಬೆಳಗ್ಗೆ ವಾಕಿಂಗ್ ಗೆ ಕೂಡಾ ಹೋಗಿಲ್ಲ. ಸಾರ್ವಜನಿಕರ ಅಹವಾಲು ಕೂಡಾ ಸಿಎಂ ಸ್ವೀಕಾರ ಮಾಡಿಲ್ಲ.
ಸಿಎಂ ಯಡಿಯೂರಪ್ಪ ಅತಿ ಹೆಚ್ಚು ದೈವ ಭಕ್ತರು. ಆಗಾಗ ದೇವಸ್ಥಾನ, ಹೋಮ-ಹವನ ಮಾಡಿಸುತ್ತಾ ಇರ್ತಾರೆ. ಈ ಗ್ರಹಣಕ್ಕೂ ಸಿಎಂ ಯಡಿಯೂರಪ್ಪ ಹೋಮ-ಹವನದ ಮೊರೆ ಹೋಗಿದ್ದಾರೆ. ಮೊನ್ನೆಯಷ್ಟೆ ಕೇರಳಾದ ಪ್ರಸಿದ್ದ ದೇವಾಲಯದಲ್ಲಿ ವಿಶೇಷ ಪೂಜೆ ಕೂಡಾ ಸಲ್ಲಿಕೆ ಮಾಡಿದ್ದಾರೆ. ಶತ್ರು ನಾಶ, ಸರ್ಕಾರ ಉಳಿವಿಗಾಗಿ ಸಿಎಂ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಈ ಗ್ರಹಣ 6 ರಾಶಿ ಅವ್ರಿಗೆ ಹೆಚ್ಚು ಅಪಾಯ ತರುತ್ತೆ ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಸಿಎಂ ಯಡಿಯೂರಪ್ಪರದ್ದು ವೃಶ್ಚಿಕ ರಾಶಿ. ಈ ರಾಶಿಗೂ ಕಂಟಕ ಇದೆ ಅಂತ ಜ್ಯೋತಿಷಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕೇರಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.